ನವದೆಹಲಿ: ಕೊರೊನಾ ವೈರಸ್‍ಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಈಗಲೇ ಕೇಂದ್ರ ಸರ್ಕಾರ ಲಸಿಕೆಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಯಾವೆಲ್ಲ ಲಸಿಕೆ?
ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ದೇಶದಲ್ಲಿ ಮೊದಲು ಲಭ್ಯವಾಗಬಹುದು. ಈಗಾಗಲೇ ಪುಣೆಯ ಸೀರಂ ಸಂಸ್ಥೆ ಮೂರನೇ ಹಂತದ ಲಸಿಕೆ ಪ್ರಯೋಗ ನಡೆಸಿದೆ. ಇದರ ಜೊತೆ ಜೊತೆಗೆ 30 ಕೋಟಿ ಡೋಸ್ ಉತ್ಪಾದಿಸಲು ತಯಾರಿ ನಡೆಸಿದೆ.
ರಷ್ಯಾದ ಸ್ಟುಟ್ನಿಕ್ ವಿ ಲಸಿಕೆ ಪ್ರಯೋಗ ಇಂದಿನಿಂದ ದೇಶದಲ್ಲಿ ಆರಂಭವಾಗಿದೆ. ಹೈದರಾಬಾದಿನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯ ಅಂತಿಮ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದಲ್ಲಿ ಫೆಬ್ರವರಿಯಲ್ಲಿ ನಮ್ಮದೇ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಂ ಸಿಇಓ
ಲಸಿಕೆ ಹಂಚಿಕೆ ಪ್ಲಾನ್ ಏನು?
ಅ.20 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲ ಪ್ರಜೆಗಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಲಸಿಕೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. 130 ಕೋಟಿ ಮಂದಿಗೆ ಲಸಿಕೆ ನೀಡಲು 50 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಲು ಚಿಂತನೆ ನಡೆದಿದೆ. ಒಂದು ಲಸಿಕೆಗೆ ಕನಿಷ್ಠ 500 ರೂ. ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ.
ಒಬ್ಬೊಬ್ಬರಿಗೆ ಎರಡು ಡೋಸ್ ನೀಡಿದರೆ ಇಡೀ ದೇಶಕ್ಕೆ 260 ಕೋಟಿ ಕೊರೋನಾ ಡೋಸ್ ಬೇಕಾಗುತ್ತದೆ. ಲಸಿಕೆ ಸಾಗಣೆ, ಸಂಗ್ರಹಣೆ ವೆಚ್ಚ 200 ರೂ. ಆಗಬಹುದು. ಎಲ್ಲ ರಾಜ್ಯಗಳಿಗೂ ಕೇಂದ್ರದಿಂದಲೇ ರಿಯಾಯಿತಿ ದರದಲ್ಲಿ ಲಸಿಕೆ ನೀಡಲು ಚಿಂತನೆ ನಡೆದಿದೆ.