ಬೆಂಗಳೂರು: ನಗರದಲ್ಲಿ ವ್ಯಾಕ್ಸಿನ್ ವಿರಣೆಗೆ ಹೆಚ್ಚು ಒತ್ತು ಕೊಡುತ್ತಿದ್ದು, 45 ವರ್ಷ ಮೇಲ್ಪಟ್ಟವರಲ್ಲಿ ಈಗಾಗಲೇ ಶೇ. 50 ಜನರಿಗೆ ವ್ಯಾಕ್ಸಿನ್ ಹಂಚಲಾಗಿದೆ. ಇನ್ನೂ ಹೆಚ್ಚಳ ಮಾಡುವ ಬಗ್ಗೆ ಮಾತನಾಡಿದ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಈಗಾಗಲೇ ಲಸಿಕೆ ನೀಡುವ ಕಾರ್ಯಕ್ರಮ ಹೆಚ್ಚು ವೇಗದಿಂದ ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಕೆಲವು ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಆ ವಾರ್ಡ್ ಗಳಲ್ಲಿ ಇತರೆ ಜಾಗಗಳಲ್ಲಿ ಲಸಿಕೆ ಕ್ಯಾಂಪ್ ನಡೆಸಲಾಗ್ತಿದೆ. 18 ರಿಂದ 45 ವರ್ಷದ ಜನರಿಗೆ, 30 ವಿಭಾಗಗಳ ಜನರಿಗೆ ಅವರು ಕೆಲಸ ಮಾಡುವ ಜಾಗಗಳಿಗೆ ಹೋಗಿ ಅವರಿಗೆ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸದ್ಯ ಬಂದಿರುವ ಮಾಹಿತಿಯ ಪ್ರಕಾರ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಾಕಷ್ಟು ಜನ ದೂರದಲ್ಲಿದ್ದಾರೆ. ಅವರ ಸ್ಥಳಕ್ಕೆ ಹೋದರೆ ಮಾತ್ರ ಕೆಲವರು ಲಸಿಕೆ ಪಡೆಯುತ್ತಾರೆ. ಈ ಹಿನ್ನಲೆ ಈಗಾಗಲೇ ಡೋರ್ ಟೂ ಡೋರ್ ಸರ್ವೇ ಮಾಡುತ್ತಿದ್ದೇವೆ. ಸರ್ವೆಯಲ್ಲಿ ಯಾರು ಲಸಿಕೆ ಪಡೆದಿಲ್ಲ ಅವರ ಪಟ್ಟಿ ಮಾಡುತ್ತಿದ್ದೇವೆ. ಪಟ್ಟಿಯಲ್ಲಿ ಯಾವ ಕ್ಷೇತ್ರದ ಜನ ಲಸಿಕೆ ತೆಗೆದುಕೊಂಡಿಲ್ಲ. ಲಸಿಕೆ ತೆಗೆದುಕೊಳ್ಳಲು ಯಾಕೆ ಮುಂದಾಗಿಲ್ಲ ಅನ್ನೊದನ್ನ ತಿಳಿದುಕೊಂಡು ಆ ಸ್ಥಳದಲ್ಲೇ ವಿಶೇಷ ಲಸಿಕೆ ಕ್ಯಾಂಪ್ ಮಾಡಲು ಮುಂದಾಗಿದ್ದೇವೆ ಎಂದರು. ಇದನ್ನೂ ಓದಿ: ಲಸಿಕೆ ಪಡೆಯದವರಿಗೆ ಇಲ್ಲ ಹೇರ್ ಕಟ್ಟಿಂಗ್, ಶೇವಿಂಗ್ – ಸಲೂನ್ ಮಾಲೀಕರ ನಿರ್ಧಾರ
ಈ ಕುರಿತು ಎಲ್ಲ ಸಿದ್ಧತೆಯಾಗಿದ್ದು ಮುಂದಿನ ದಿನಗಳಲ್ಲಿ ಚಾಲ್ತಿಗೆ ಬರಲಿದೆ. ಫ್ಯಾಕ್ಟರಿಗಳಲ್ಲಿ ಈಗಾಗಲೇ ಲಸಿಕೆ ಕ್ಯಾಂಪ್ ಗಳನ್ನ ಮಾಡಲಾಗಿದೆ. ಬೆಂಗಳೂರು ಅಪಾರ್ಟ್‍ಮೆಂಟ್ ಫೆಡರೇಶನ್ ಅವರು ಕೂಡ ಖಾಸಗಿ ಆಸ್ಪತ್ರೆಗಳ ಜೊತೆ ಲಿಂಕ್ ಅಪ್ ಮಾಡಿಕೊಂಡು ಲಸಿಕೆ ಕ್ಯಾಂಪ್ ಮಾಡಿದ್ದಾರೆ. ಇನ್ನು ಖಾಸಗಿ ರಂಗದ ಸಂಸ್ಥೆಗಳು ಹಲವು ಕಡೆ ಕ್ಯಾಂಪ್ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ಉಪಯೋಗವಾಗುವಂತೆ ಜನರ ಮನೆಯ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಕೆಲಸ ಬಿಬಿಎಂಪಿ ಕಡೆಯಿಂದ ಮಾಡುತ್ತೇವೆ ಎಂದರು.