ಬೆಂಗಳೂರು: ದೇಶವೇ ಕೋವಿಡ್ ಎರಡನೇ ಅಲೆಯ ಬೇಗುದಿಯಲ್ಲಿದೆ. ಲಾಕ್‍ಡೌನ್‍ನಿಂದಾಗಿ ಸೇವಾ ವಲಯ ಮತ್ತು ಉತ್ಪಾದನಾ ವಲಯ ನೆಲಕಚ್ಚಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಲಾಕ್‍ಡೌನ್ ಪರಿಣಾಮ ಲಕ್ಷಾಂತರ ಜನರಿಗೆ ಉದ್ಯೋಗ ನಷ್ಟವಾಗಿದೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಬೇಕಾದ ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರಗಳು ಬೆಲೆಯೇರಿಸಿ ಜನರ ಹಸಿ ಗಾಯದ ಮೇಲೆ ಬರೆ ಎಳೆದಿವೆ ಎಂದು ಕಿಡಿಕಾರಿದರು.
Advertisement
Advertisement
ಮೋದಿಯವರ ಸರ್ಕಾರ ಜನಹಿತ ಮರೆತಿದೆ. ಕೋವಿಡ್ ಸಂಕಷ್ಟದ ಮಧ್ಯೆ ನಿರಂತರವಾಗಿ ತೈಲ ಬೆಲೆ ಏರಿಸುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 1 ಲೀಟರ್ ಪೆಟ್ರೋಲ್ 30 ರೂಪಾಯಿ ಹೆಚ್ಚಳವಾಗಿದೆ. ಸದ್ಯ ಪೆಟ್ರೋಲ್ ಸಾರ್ವಕಾಲಿಕ ಹೆಚ್ಚಳ ಕಂಡು ಸೆಂಚುರಿ ಬಾರಿಸಿದೆ. ಡಿಸೇಲ್ ಕೂಡ ಶತಕದ ಗಡಿ ಸಮೀಪಿಸಿದೆ. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಕಚ್ಛಾ ತೈಲದ ಬೆಲೆ 125 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 70 ರೂಪಾಯಿಯಷ್ಟಿತ್ತು. ಈಗ ಕಚ್ಛಾತೈಲದ ಬೆಲೆ 70 ಡಾಲರ್ ಇದ್ದರೂ ಪೆಟ್ರೋಲ್ ಬೆಲೆ 100 ದಾಟಿದೆ. ಜೊತೆಗೆ ಈಗಿನ ಕೇಂದ್ರ ಸರ್ಕಾರ ಲೀಟರ್ ಪೆಟ್ರೋಲ್ ಮೇಲೆ 31.84 ಹಾಗೂ ಡಿಸೇಲ್ ಮೇಲೆ 32.84 ಅಬಕಾರಿ ಸುಂಕ ವಿಧಿಸಿ ಜನರ ಸುಲಿಗೆ ಮಾಡುತ್ತಿದೆ. 1 ಲೀಟರ್ ಪೆಟ್ರೋಲ್ ಮೂಲಬೆಲೆ 35 ರೂಪಾಯಿ ಇದ್ದರೂ ಜನರು 65 ರೂಪಾಯಿ ತೆರಬೇಕು. ಪ್ರಪಂಚದಲ್ಲಿ ಒಂದು ಲೀಟರ್ ಪೆಟ್ರೋಲ್‍ಗೆ ಶೇ.65 ರಷ್ಟು ತೆರಿಗೆ ಪಾವತಿಸುತ್ತಿರುವುದು ಭಾರತದಲ್ಲಿ ಮಾತ್ರ ಎಂದರು.
Advertisement
Advertisement
ತೈಲಬೆಲೆ ಏರಿಕೆಯ ನೇರ ಪರಿಣಾಮ ಅಗತ್ಯ ವಸ್ತುಗಳ ಮೇಲೆ ಬಿದ್ದಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗಿದೆ. ವರ್ಷದ ಹಿಂದೆ ಸಾಮಾನ್ಯ ಕುಟುಂಬ ಮಾಸಿಕ 4 ಸಾವಿರದಲ್ಲಿ ಮನೆ ಖರ್ಚು ನಿಭಾಯಿಸುತಿತ್ತು. ಈಗ ಅದೇ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ಬೇಕು. 80 ರೂಪಾಯಿ ಇದ್ದ ತೊಗರಿಬೇಳೆಗೆ ಇಂದು 160 ರೂಪಾಯಿ. ಅಡುಗೆ ಎಣ್ಣೆಯ ಬೆಲೆ 90 ರಿಂದ 200 ರೂಪಾಯಿಗೆ ಏರಿಕೆಯಾಗಿದೆ. ಈ ಮಧ್ಯೆ 2013-14 ರಲ್ಲಿ 400 ರೂಪಾಯಿ ಇದ್ದ ಒಂದು ಗ್ಯಾಸ್ ಸಿಲಿಂಡೆರ್‍ನ ಬೆಲೆ 850 ಕ್ಕೆ ತಲುಪಿದೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಪ್ರತಿ ಯೂನಿಟ್ ವಿದ್ಯತ್‍ಗೆ 30 ಪೈಸೆ ಏರಿಸಿದೆ. ಈ ಸಂದರ್ಭದಲ್ಲಿ ವಿದ್ಯುತ್ ದರ ಏರಿಸುವ ಸರ್ಕಾರದ ನಿರ್ಧಾರ ಸಂವೇದನಾರಹಿತಾ ನಡೆ. ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರ ಜೊತೆ ಕೈಗಾರಿಕಾ ಕ್ಷೇತ್ರಕ್ಕೂ ದೊಡ್ಡ ಹೊಡೆತ ನೀಡಲಿದೆ. ಈಗಾಗಲೇ ಕೈಗಾರಿಕೆಗಳು ಲಾಕ್‍ಡೌನ್‍ನಿಂದಾಗಿ ಉತ್ಪಾದನೆ ನಿಲ್ಲಿಸಿವೆ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬಾಗಿಲು ಮುಚ್ಚಿದರೆ ಆಗುವ ಉದ್ಯೋಗ ನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ರಾಜ್ಯದ ಜನ ಕೊರೊನಾ 2ನೇ ಅಲೆಯ ಭೀಕರ ಪರಿಣಾಮ ಎದುರಿಸುವಂತಾಯಿತು. ಚಾಮರಾಜನಗರದ ದುರಂತ ರಾಜ್ಯ ಸರ್ಕಾರದ ಪಾಪದ ಫಲ. ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಲಾಕ್‍ಡೌನ್ ನಂತರ ಜನರ ಜೀವನದ ಮೇಲಾಗುವ ಪರಿಣಾಮದ ಬಗ್ಗೆ ಸರ್ಕಾರ ಯೋಚಿಸಲೇ ಇಲ್ಲ. ಲಾಕ್‍ಡೌನ್‍ನಿಂದ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಯಿತು. ನಮ್ಮ ಪಕ್ಷ ನಿರಂತರವಾಗಿ ಒತ್ತಡ ಹೇರಿದ ಮೇಲೆ ಮುಖ್ಯಮಂತ್ರಿಯವರು ಕಾಟಾಚಾರಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಆದರೆ ಅದೊಂದು ಎಲ್ಲರನ್ನೂ ಒಳಗೊಳ್ಳದ ಕಣ್ಣೊರೆಸುವ ಪ್ಯಾಕೇಜ್ ಎಂದರು.
ಲಾಕ್‍ಡೌನ್ ಪರಿಣಾಮ ರಾಜ್ಯದ ರೈತರ ಬದುಕು ಬೀದಿಗೆ ಬಂದಿದೆ. ಲಾಕ್‍ಡೌನ್‍ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರೂ ಬಿತ್ತನೆ ಬೀಜ ಸಿಗದೆ, ಸಕಾಲಕ್ಕೆ ರಸಗೊಬ್ಬರ ಸಿಗದೆ ಹೈರಾಣಾಗಿದ್ದಾರೆ. ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‍ನಲ್ಲಿ ರೈತರಿಗೆ ನಯಾಪೈಸೆಯ ನೆರವು ಸಿಗಲಿಲ್ಲ. ಕೇವಲ ಹೂವು ಬೆಳೆಗಾರರಿಗೆ ಹತ್ತು ಸಾವಿರ ಘೋಷಣೆ ಮಾಡಿ ಸರ್ಕಾರ ಕೈ ತೊಳೆದುಕೊಂಡಿದೆ ಎಂದು ಗರಂ ಆದರು.
ಸರ್ಕಾರ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸುವ ಕೆಲಸ ಬಿಡಬೇಕು. ಕೋವಿಡ್ ವಿಷಮ ಗಳಿಗೆಯಲ್ಲಿ ಬೆಲೆ ಏರಿಸುವ ನಿರ್ದಯತೆ ಸರ್ಕಾರಕ್ಕಿರಬಾರದು. ಕೇಂದ್ರ ಸರ್ಕಾರ ತೈಲಬೆಲೆ ಇಳಿಸಿ, ಅಗತ್ಯ ವಸ್ತುಗಳ ಬೆಲೆ ಇಳಿಸಲಿ ಇನ್ನು ಸರ್ಕಾರಕ್ಕೆ ನನ್ನ ಆಗ್ರಹವೇನೆಂದರೆ, ಸರ್ಕಾರ ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳ ಸಹಾಯಧನ ನೀಡಬೇಕು. ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟು ವಿನಾಯಿತಿ ನೀಡಬೇಕು. ಜೊತೆಗೆ ಈ ಕೂಡಲೆ ವಿದ್ಯುತ್ ದರ ಇಳಿಸಿ ಯಥಾಸ್ಥಿತಿ ಕಾಪಾಡಬೇಕೆಂದು ಆಗ್ರಹಿಸುವುದಾಗಿ ಗುಂಡೂರಾವ್ ಹೇಳಿದ್ದಾರೆ.