– ಮಷ್ಕರ ನಿರತ ಸಿಬ್ಬಂದಿಗೆ ಸಂಬಳ ಇಲ್ಲ
ಬೀದರ್: ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ರಾಜ್ಯದ ಜನ ಸಹಕರಿಸದಿದ್ದರೆ ಲಾಕ್‍ಡೌನ್ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿಎಂ, ಸದ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಜನ ಎಚ್ಚರಗೊಂಡು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕು. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದ್ರೆ ಪ್ರಧಾನಿ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಲಾಕ್‍ಡೌನ್ ಬರದಂತೆ ಜನ ಸಹಕರಿಸಬೇಕು. ಕಾದು ನೋಡಿ ಮುಂದಿನ ತಿರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಚುನಾವಣೆ ಮುಗಿದ ಮೇಲೆ ಟಫ್ ರೂಲ್ಸ್ ಜಾರಿ ಮಾಡುತ್ತೇವೆ. ಇನ್ನು 2-3 ದಿನಗಳಲ್ಲಿ ಚುನಾವಣೆ ಮುಗಿಯುತ್ತದೆ. ಬಳಿಕ ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಧಾನಿ ಜೊತೆ ಐದು ನಿಮಿಷ ಮಾತಾನಾಡಿದ್ದೆನೆ. ಕೊರೊನಾ ಜಾಸ್ತಿಯಾಗುತ್ತಿರುವುದು ನಿಜ. ಅದಕ್ಕೆ ನೈಟ್ ಕಫ್ರ್ಯೂ ಜಾರಿ ಮಾಡಿದ್ದೇವೆ. ಜನರು ಸಹಕಾರ ಮಾಡಿದ್ರೆ ಕೊರೊನಾ ಕಂಟ್ರೋಲ್ ಮಾಡಬಹುದು. ಒಂದು ವಾರ ಕಾದೂ ನೋಡಿ ಏನು ಮಾಡಬೇಕು ಅಂತ ತಿರ್ಮಾನ ಮಾಡುತ್ತೇವೆ. ಪ್ರಧಾನಿ ನಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಹಬ್ಬದ ದಿನಗಳಲ್ಲಿ ಸಾರಿಗೆ ನೌಕರರು ಈ ರೀತಿ ಮಾಡೋದು ಸರಿಯಲ್ಲ. ಸಾರಿಗೆ ನೌಕರರು ಬಂದು ಬಸ್ ಓಡಿಸಬೇಕು. ತಕ್ಷಣ ಗೌರವದಿಂದ ಬಂದು ಬಸ್ ಓಡಿಸಿ ಪ್ರಯಾಣಿಕರ ತೊಂದರೆಗಳನ್ನು ನಿವಾರಿಸಬೇಕು. ಯಾರು ಮುಷ್ಕರ ಮಾಡುತ್ತಿದ್ದಾರೆಯೋ ಅವರಿಗೆ ನಾವು ಸಂಬಳ ಕೊಡಲ್ಲ ಎಂದು ಸಿಎಂ ಬಿಎಸ್‍ವೈ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ತಡೆಗಟ್ಟಲು ಬಿಗಿ ಕ್ರಮಕ್ಕಾಗಿ ಇದೇ 18, 19 ರಂದು ಮಹತ್ವದ ಸಭೆ ನಡೆಸುತ್ತೇನೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಎಲ್ಲರನ್ನೂ ಸಭೆಗೆ ಕರೆಯುತ್ತೇನೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದುಕೊಂಡೇ ಬಿಗಿ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ನಿಯಂತ್ರಣಕ್ಕೆ ಎಲ್ಲರ ಸಹಕಾರ ಬೇಕು ಎಂದು ಸಿಎಂ ಹೇಳಿದರು.