– ವಿರೋಧ ವ್ಯಕ್ತಪಡಿಸಿದ ಆಸೀಸ್ ಕೋಚ್
– ಗಾಯಗೊಂಡಿದ್ದರೂ 9 ರನ್ ಸೇರಿಸಿದ್ದ ಜಡೇಜಾ
ಕ್ಯಾನ್ಪೆರಾ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಜಡೇಜಾ ಅವರ ಬದಲಿಗೆ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಮಿಚೆಲ್ ಸ್ಟಾರ್ಕ್ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರಿನ ಎರಡನೇ ಎಸೆತ ಬೌನ್ಸರ್ ಆಗಿತ್ತು. ಈ ಎಸೆತ ಜಡೇಜಾ ಹೆಲ್ಮೆಟ್‌ಗೆ ಬಡಿದು ಬ್ಯಾಕ್‌ವರ್ಡ್ ಪಾಯಿಂಟ್‌ಗೆ ಹೋಯಿತು. ಜಡೇಜಾ ಈ ಎಸೆತದಲ್ಲಿ ಒಂದು ರನ್ ಓಡಿದರೂ ಅಂಗಣಕ್ಕೆ ವೈದ್ಯಾಧಿಕಾರಿ ಬಂದು ಕನ್ಕಷನ್ ಪರೀಕ್ಷೆ ನಡೆಸಿರಲಿಲ್ಲ.
Advertisement
ನಂತರದ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಔಟಾದ ಕಾರಣ ಮತ್ತೆ ಜಡೇಜಾ ಸ್ಟ್ರೈಕ್‌ಗೆ ಬಂದರು. 4 ಮತ್ತು 5ನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಜಡೇಜಾ ಕೊನೆಯ ಎಸೆತದಲ್ಲಿ 1 ರನ್ ತೆಗೆಯುವ ಮೂಲಕ ತಂಡದ ಮೊತ್ತವನ್ನು 160ಕ್ಕೆ ತಂದು ನಿಲ್ಲಿಸಿದರು.
Advertisement
Advertisement
ಇನ್ನಿಂಗ್ಸ್ ಬ್ರೇಕ್ ಸಂದರ್ಭದಲ್ಲಿ ಭಾರತ ತಂಡ ಜಡೇಜಾ ಅವರಿಗೆ ಗಂಭೀರವಾದ ಗಾಯವಾದ ಕಾರಣ ಅವರ ಬದಲು ಯಜುವೇಂದ್ರ ಚಹಲ್ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
Advertisement
ಟೀಮ್ ಇಂಡಿಯಾ ಕನ್ಕಷನ್ ಸಬ್ ತೆಗೆದುಕೊಳ್ಳುತ್ತಿರುವುದಾಗಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಗಮನಕ್ಕೆ ತಂದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್‌ಗೆ ತಿಳಿಸಿದಾಗ ಲ್ಯಾಂಗರ್ ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಡೇವಿಡ್ ಬೂನ್ ಎದುರು ವಾದಕ್ಕಿಳಿದ ಲ್ಯಾಂಗರ್ ಇದು ಸರಿಯಾದ ನಿರ್ಧಾರ ಅಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಐಸಿಸಿ ನಿಯಮಗಳನ್ನು ಪಾಲನೆ ಮಾಡಬೇಕಾದ ಕಾರಣ ರೆಫ್ರಿ ಡೇವಿನ್ ಬೂನ್ ಬದಲಿ ಆಟಗಾರನನ್ನು ಆಡಿಸಲು ಒಪ್ಪಿಗೆ ನೀಡಿದರು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ
ಚರ್ಚೆ ಏನು?
ರವೀಂದ್ರ ಜಡೇಜಾ ಆಲ್‌ರೌಂಡರ್ ಆಟಗಾರನಾಗಿದ್ದು ಗಾಯಗೊಂಡ ಅವರ ಬದಲು ಚಹಲ್ ಅವರನ್ನು ಆಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಅಷ್ಟೇ ಅಲ್ಲದೇ ಜಡೇಜಾ ಗಂಭೀರವಾಗಿ ಗಾಯಗೊಂಡಿದ್ದರೆ ಅರ್ಧದಲ್ಲೇ ಕ್ರೀಡಾಂಗಣವನ್ನು ತೊರೆಯಬೇಕಿತ್ತು. ಆದರೆ ನಂತರ 9 ರನ್ ಹೊಡೆದಿದ್ದಾರೆ. ಹೀಗಿರುವಾಗ ಗಾಯದ ಬಗ್ಗೆಯೇ ಅನುಮಾನ ಎದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಈ ಹಿಂದೆ ಜಡೇಜಾ ಅವರನ್ನು ಟೀಕೆ ಮಾಡಿ ಸುದ್ದಿಯಾಗಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್, ಈ ಪಂದ್ಯದ ವೇಳೆ ಭಾರತ ತಂಡ ಕನ್ಕಷನ್ ಸಬ್‌ಸ್ಟಿಟ್ಯೂಟ್ ನಿಯಮದ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಹೇಳಿ ಬಿಸಿ ಚರ್ಚೆಗೆ ತುಪ್ಪ ಸುರಿದರು. ಅಷ್ಟೇ ಅಲ್ಲದೇ ಐಸಿಸಿ ಈ ನಿಯಮದ ದುರ್ಬಳಕೆ ಆಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕಾಮೆಂಟೇಟರ್ ಹರ್ಷ ಭೋಗ್ಲೆ, ಕೆಲ ಪ್ರಕರಣಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತಡವಾಗಿ ಕನ್ಕಷನ್ ಗುಣಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಳೆದ ವರ್ಷ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ತಂಡ ಇದೇ ರೀತಿ ತಡವಾಗಿ ಕನ್ಕಷನ್ ಸಬ್ ತೆಗೆದುಕೊಂಡ ಉದಾಹರಣೆ ಇದೆ ಎಂದು ಹೇಳಿ ಟೀಂ ಇಂಡಿಯಾ ನಡೆಯನ್ನು ಸಮರ್ಥಿಸಿಕೊಂಡರು.
ಐಸಿಸಿ ನಿಯಮ ಏನು?
ಬ್ಯಾಟಿಂಗ್ ವೇಳೆ ಚೆಂಡು ಬ್ಯಾಟ್ಸ್‌ಮನ್‌ನ ಹೆಲ್ಮೆಟ್‌ಗೆ ಬಡಿದರೆ ಆವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಬದಲಿ ಆಟಗಾರನನ್ನು ಆಡಿಸಬಹದು ಎಂದು ಐಸಿಸಿ 2019ರ ಜುಲೈನಲ್ಲಿ ನಿಯಮವನ್ನು ತಂದಿತ್ತು. ಈ ರೀತಿ ಆಡುವ 11ರ ಬಳಗಕ್ಕೆ ಬದಲಿ ಆಟಗಾರನಾಗಿ ಸೇರುವ ಆಟಗಾರನಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶವನ್ನು ನೀಡಲಾಗುತ್ತದೆ.
ಈ ಪಂದ್ಯದಲ್ಲಿ ಜಡೇಜಾ ಔಟಾಗದೇ 44 ರನ್(23 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರೆ ಚಹಲ್ 4 ಓವರ್ ಎಸೆದು 25 ರನ್ ನೀಡಿ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.