– ಲಾಕ್‍ಡೌನ್‍ನಲ್ಲಿ ಕೆಲಸ ಕಳ್ಕೊಂಡ ಪತಿ
– ಅನಾಥವಾದ ಮಕ್ಕಳು
ಲಕ್ನೋ: ಕೌಟುಂಬಿಕ ಕಲಹದಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ನಡೆದಿದೆ.
ರಾಕೇಶ್ ಕುಮಾರ್ ಸಿಂಗ್ (40) ಮತ್ತು ಪತ್ನಿ ಅರ್ಚನಾ (36) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಕುಟುಂಬದವರು ಮತ್ತು ನೆರೆಹೊರೆಯವರು ಅವರನ್ನು ತಕ್ಷಣ ಕೆಳಗಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ದಂಪತಿ ಮೃತಪಟ್ಟಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ರಾಜ್‍ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದ ವೇಳೆ ಸಿಂಗ್ ಕೆಲಸ ಕಳೆದುಕೊಂಡಿದ್ದ. ಇದರಿಂದ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀವಾಸ್ತವ ಹೇಳಿದ್ದಾರೆ.