ನವದೆಹಲಿ: ಜಗತ್ತು ಸಾಧನೆಯನ್ನು ಕಂಡಿದೆ, ನಾನು ವ್ಯಕ್ತಿಯನ್ನು ನೋಡಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ ಮಾಜಿ ನಾಯಕ ಎಂಎಸ್ ಧೋನಿಯ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕಾಗಿ 15 ವರ್ಷಗಳ ಕಾಲ ಆಟವಾಡಿದ ಚಾಣಾಕ್ಷ ಆಟಗಾರ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ವಿರಾಟ್ ಕೊಹ್ಲಿ ಅವರು, ಧೋನಿಯನ್ನು ಹಾಡಿ ಹೊಗಳಿದ್ದಾರೆ.
https://www.instagram.com/p/CD6lUbcluL6/?utm_source=ig_embed
ಎಲ್ಲ ಕ್ರಿಕೆಟರ್ ಗಳು ಒಂದು ದಿನ ತನ್ನ ಪ್ರಯಾಣವನ್ನು ಮುಗಿಸಲೇಬೇಕು. ಆದರೆ ಕೆಲವರು ನಿವೃತ್ತಿ ಘೋಷಣೆ ಮಾಡಿದಾಗ ಬಹಳ ನೋವಾಗುತ್ತದೆ. ನೀವು ದೇಶಕ್ಕಾಗಿ ಮಾಡಿದ ಸಾಧನೆ ಮತ್ತು ಕೆಲಸ ಎಲ್ಲರ ಹೃದಯದಲ್ಲಿ ಹಾಗೇ ಉಳಿದಿದೆ. ಜೊತೆಗೆ ನೀವು ಕೊಟ್ಟ ವೈಯಕ್ತಿಕ ಗೌರವ ಮತ್ತು ಪ್ರೀತಿ ನನ್ನಲ್ಲೇ ಉಳಿದಿದೆ. ಜಗತ್ತು ಸಾಧನೆಯನ್ನು ಕಂಡಿದೆ, ನಾನು ವ್ಯಕ್ತಿಯನ್ನು ನೋಡಿದ್ದೇನೆ. ನೀವು ಮಾಡಿದ ಎಲ್ಲ ಕೆಲಸಕ್ಕೂ ಧನ್ಯವಾದಗಳು ನಾಯಕ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
38 ವರ್ಷದ ಎಂ.ಎಸ್.ಧೋನಿ 2019ರ ವಿಶ್ವ ಕಪ್‍ನ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲನುಭವಿಸಿದ ಪಂದ್ಯದಲ್ಲಿ ಕೊನೆಯದಾಗಿ ಆಟವಾಡಿದ್ದರು. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಧೋನಿ ಈವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಮುಂದಿನ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಐಪಿಎಲ್-2020ಯಲ್ಲಿ ಧೋನಿಯವರು ಆಡಲಿದ್ದಾರೆ.
350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.