ಉಡುಪಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಕ್ಷ್ಮೀ ನಗರದ ಸರ್ಕಾರಿ ಶಾಲೆಯ ಬಳಿ ಸೋಮವಾರ ತಡರಾತ್ರಿ ಕೊಲೆಯಾಗಿದೆ. ಕೊಲೆಯಾದ ಯುವಕನನ್ನು ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ನಿವಾಸಿ ಯೋಗೀಶ್ ಪೂಜಾರಿ (28) ಎಂದು ಗುರುತಿಸಲಾಗಿದೆ. ಈತ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದನು.
ರೌಡಿ ಶೀಟರ್ ಪಿಂಟೋ ಮತ್ತು ಆತನ ಐದಾರು ಸಹಚರರು ಕ್ಷುಲ್ಲಕ ವಿಷಯಕ್ಕಾಗಿ ಯೋಗೀಶ್ ಪೂಜಾರಿಯ ಜೊತೆ ಲಕ್ಷ್ಮೀನಗರದಲ್ಲಿ ಸೋಮವಾರ ತಡರಾತ್ರಿ ಗಲಾಟೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಮೂಲಕ ತಿಳಿದು ಬಂದಿದೆ. ಈ ವೇಳೆ ದುಷ್ಕರ್ಮಿಗಳು ಯೋಗೀಶ್ ಪೂಜಾರಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಗೀಶ್ ಪೂಜಾರಿಯನ್ನು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಯೋಗೀಶ್ ಮೃತಪಟ್ಟಿದ್ದಾನೆ. ರೌಡಿ ಶೀಟರ್ ಪಿಂಟೋ ಮೇಲೆ ಈಗಾಗಲೇ ಮೂರ್ನಾಲ್ಕು ಕೊಲೆಗಳ ಆರೋಪ ಇದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮಲ್ಪೆ ಪೊಲೀಸರು ಬಲೆ ಬೀಸಿದ್ದಾರೆ.