ವಿಜಯಪುರ: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಇಂಡಿ ಪೊಲೀಸರು ಯಶಸ್ವಿ ಆಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶರಣಬಸಪ್ಪ ಗಣಪತಿ ಹರಿಜನ(35), ಬಾಬು ಮಲಕಪ್ಪ ದೇವರಮನಿ(34) ಬಂಧಿತ ಆರೋಪಿಗಳಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾರ್ಸನಳ್ಳಿಯಲ್ಲಿ ಫೆ.8ರಂದು ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಫೆ.9ರಂದು ಅರ್ಜುಣಗಿ ಬಿ. ಕೆ. ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಆ ಸಂದರ್ಭ ಮಾರ್ಸ ನಳ್ಳಿ ಗ್ರಾಮದ ಶಿವಮ್ಮ ಮಾದರ ಅಧ್ಯಕ್ಷೆಯಾಗುತ್ತಾಳೆ ಎಂದು ಸಿಟ್ಟಾಗಿದ್ದರು. ಈ ಹಿನ್ನೆಲೆ ಫೆ. 8 ರಂದು ರಾತ್ರಿ 1 ಕ್ಕೆ ಆರೋಪಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ.
ತಮ್ಮ ಕೃತ್ಯದಿಂದ ಚುನಾವಣೆ ನಿಲ್ಲುತ್ತದೆ ಎಂದು ಭಾವಿಸಿದ್ದರು. ತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಂಡರು ಅಪಮಾನ ಮಾಡಿದ್ದಾರೆಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.