– ಹೆಚ್ಚು ಹಣ ನೀಡಿದವರಿಗೆ ಸದಸ್ಯ ಸ್ಥಾನ ಫಿಕ್ಸ್
ಬಳ್ಳಾರಿ: ಪ್ರತಿ ಹಳ್ಳಿಗಳಲ್ಲಿಯೂ ಚುನಾವಣೆ ಕಾವು ಜೋರಾಗಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆಯ ಸದಸ್ಯರನ್ನೇ ಹರಾಜು ಹಾಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಜ್ಞಾವಂತ ಸಮುದಾಯ ತಲೆತಗ್ಗಿಸುವಂತಾಗಿದೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೋ ಅವರನ್ನ ಜಯಶಾಲಿ ಎಂದು ಘೋಷಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಬಸಿಂದಿಗೇರಿ ಗ್ರಾಮ ಪಂಚಾಯ್ತಿಗೆ ಸೇರಿದ ಬೈಲೂರು ಗ್ರಾಮದ ಎಲ್ಲ ಸದಸ್ಯ ಸ್ಥಾನಗಳು ಹರಾಜ್ ಆಗಿವೆ.
ಒಟ್ಟು 26 ಸದಸ್ಯ ಸ್ಥಾನ ಹೊಂದಿರುವ ಸಿಂದಿಗೇರಿ ಗ್ರಾಮ ಪಂಚಾಯ್ತಿಯಲ್ಲಿ 2 ರಿಂದ 5.7 ಲಕ್ಷದ ವರೆಗೂ ಹಣ ಪಾವತಿಸಿ ಸದಸ್ಯತ್ವ ಪಡೆದಿದ್ದಾರೆ. ಗ್ರಾಮದ ಮಾರಮ್ಮನ ಗುಡಿ ಮುಂದೆ ರಾತ್ರೋ ರಾತ್ರಿ ನಡೆದ ಹರಾಜು ಪ್ರಕ್ರಿಯೆ ನಡೆದಿದೆ. ಹೆಚ್ಚಿಗೆ ಹಣ ನೀಡಿದವರನ್ನ ಗ್ರಾ.ಪಂ. ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯವನ್ನ ಕೊಲೆ ಮಾಡಲಾಗಿದೆ.
ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಜಿ.ಪಂ. ಸಿಇಒ ನಂದಿನಿ ಅವರು, ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲ ಆಕಾಂಕ್ಷಿಗಳ ಮೇಲೆ ಪ್ರಕರಣ ದಾಖಲಿಸಲು ಸ್ಥಳೀಯ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದ್ರೆ ಚುನಾವಣೆ ನಡೆಸುವ ಬದಲು, ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದೇವೆ. ಬಂದ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡೋದಾಗಿ ಬೈಲೂರು ಗ್ರಾಮಸ್ಥರು ಹರಾಜು ಪ್ರಕ್ರಿಯೆಯನ್ನ ಸಮರ್ಥಿಸಿಕೊಂಡಿದ್ದಾರೆ.