ಚುನಾವಣಾ ಪೂರ್ವ ಸಮೀಕ್ಷೆ- ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್, ಕೇರಳದಲ್ಲಿ ಎಲ್‍ಡಿಎಫ್ ಸೇಫ್

Public TV
4 Min Read
Mamata

– ತಮಿಳುನಾಡು ಡಿಎಂಕೆ, ಅಸ್ಸಾಂನಲ್ಲಿ ಬಿಜೆಪಿಗೆ ಬಿಗ್ ಫೈಟ್
– ಪುದುಚೇರಿಯಲ್ಲಿ ಎನ್‍ಡಿಎಗೆ ಗೆಲುವಿನ ಸಿಹಿ

ನವದೆಹಲಿ: ಒಂದು ಕೇಂದ್ರಾಡಳಿಯ ಪ್ರದೇಶ ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಗೊಂಡಿದೆ.

ಬಿಜೆಪಿಯ ತೀವ್ರ ಸ್ಪರ್ಧೆಯ ನಡುವೆಯೂ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೇರಳದಲ್ಲಿ ಎಲ್‍ಡಿಎಫ್ ಬಳಿಯಲ್ಲಿಯೇ ಉಳಿಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ವಾಪಸ್ ಬರಲಿದೆ. ಸದ್ಯ ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ನೇರ ಹಣಾಹಣಿ ನಡೆಯಲಿದ್ದು, ಪುದುಚೇರಿಯಲ್ಲಿ ಎನ್‍ಡಿಎಗೆ ಗೆಲುವು ಸಿಗಲಿದೆ ಎಂದು ಹೇಳಿದೆ.

evm 1490347648

ಬಂಗಾಳದಲ್ಲಿ ಬಿಜೆಪಿಗೆ ಲಾಭ, ಅಧಿಕಾರದಿಂದ ದೂರ:
ಅಭಿಪ್ರಾಯ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ದೀದಿ ಮೂರನೇ ಬಾರಿ ಸರ್ಕಾರ ರಚನೆ ಮಾಡಲಿದ್ದಾರೆ. ಟಿಎಂಸಿ 160 ಕ್ಷೇತ್ರಗಳಲ್ಲಿ ಗೆಲುವು ಕಾಣಬಹುದು. 2016ರಲ್ಲಿ ಟಿಎಂಸಿ 211 ಕ್ಷೇತ್ರಗಳಲ್ಲಿ ಜಯ ದಾಖಲಿಸಿತ್ತು. ಈ ಬಾರಿ 200 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಅಂತ ಕಮಲ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಮೂರು ಕ್ಷೇತ್ರಗಳಲ್ಲಿದ್ದ ಬಿಜೆಪಿ ಈ ಬಾರಿ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಮಲ ಧ್ವಜ ಹಾರಿಸಲಿದೆ ಎಂದು ಪೋಲ್ ನಲ್ಲಿ ಹೇಳಲಾಗಿದೆ. ಟಿಎಂಸಿ ಗಿಂತ ಬಿಜೆಪಿ ಶೇಕಡಾವಾರು ಮತಗಳಿಕೆ ಹೆಚ್ಚಿರಲಿದೆ.

BJP 1

ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ದೊಡ್ಡ ಸೋಲು ಕಾಣುವ ಸಾಧ್ಯತೆ ಇದೆ ಅನ್ನೋದು ಬಂಗಾಳ ಜನತೆಯ ಅಭಿಪ್ರಾಯ. ಕಾಂಗ್ರೆಸ್ ಮೈತ್ರಿ ಸುಮಾರು 26 ಕ್ಷೇತ್ರಗಳಲ್ಲಿ ಮಾತ್ರ ವಿಜಯದ ನಗೆ ಬೀರುವ ಸಾಧ್ಯತೆಗಳಿವೆ. ಶೇ.5ರಷ್ಟು ಜನರು ಮಮತಾ ಬ್ಯಾನರ್ಜಿ ನೆಚ್ಚಿನ ನಾಯಕಿ ಎಂದು ಒಪ್ಪಿಕೊಂಡಿದ್ದು, ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಎರಡನೇ ಸ್ಥಾನದಲ್ಲಿದ್ದಾರೆ.

Congress

ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ:
ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಜೊತೆಯಾಗಿ ಚುನಾವಣೆ ಎದುರಿಸುತ್ತಿದ್ದು, ಸರ್ಕಾರ ರಚಿಸಲಿದೆ ಎಂದು ಅಭಿಪ್ರಾಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. 234 ವಿಧಾನಸಭಾ ಕ್ಷೇತ್ರಗಳಲ್ಲಿ 177ರಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಗೆಲ್ಲಲಿದೆ. ಸದ್ಯ ಅಧಿಕಾರದಲ್ಲಿರುವ ಎಐಎಎಂಡಿಕೆ ಬಿಜೆಪಿ ಜೊತೆಯಲ್ಲಿ ಚುನಾವಣೆ ಎದುರಿಸಿದ್ದು, ಮತಗಳಿಕೆಯಲ್ಲಿ ದೊಡ್ಡ ಪೆಟ್ಟು ಬೀಳಲಿದೆ.

Congress

ಕಮಲ್ ಹಾಸನ್ ನೇತೃತ್ವದ ಎಂಎನ್‍ಎಂ ಮತ್ತು ಟಿಟಿವಿ ದಿನಕರನ್ ಅವರ ಎಎಂಎಂಕೆ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಕಾಣೋದು ಕಷ್ಟವಾಗಲಿದೆ. ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ತಮಿಳುನಾಡು ಜನರ ಮೊದಲ ಆಯ್ಕೆ. ಶೇ.43.1ರಷ್ಟು ಜನ ಸ್ಟಾಲಿನ್ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ರೆ, ಶೇ.29.7 ಜನರ ಆಯ್ಕೆ ಸಿಎಂ ಪಳನಿಸ್ವಾಮಿ ಆಗಿದ್ದಾರೆ.

KAMAL HASSAN

ಅಸ್ಸಾಂನಲ್ಲಿ ಎನ್‍ಡಿಎ-ಯುಪಿಎ ನಡುವೆ ಸಮಬಲದ ಹೋರಾಟ:
ಸಮೀಕ್ಷೆ ಪ್ರಕಾರ ಬಿಜೆಪಿ ಸರ್ಕಾರ ಇರೋ ಅಸ್ಸಾಂನಲ್ಲಿ ಎನ್‍ಡಿಎ ಮತ್ತು ಯುಪಿಎ ನಡುವೆ ಸಮಬಲದ ಹೋರಾಟ ನಡೆಯಲಿದೆ. ಸಮೀಕ್ಷೆಯ ಪ್ರಕಾರ 126 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ 69 ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ 56ರಲ್ಲಿ ಗೆಲುವು ಕಾಣಲಿದೆ. ಈ ಬಾರಿ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್ ಸೇರಿದಂತೆ ಮೂರು ಎಡಪಕ್ಷಗಳೊಂದಿಗೆ ಮೈತ್ರಿ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದೆ.

Rahul 3

ಇತ್ತ ಎನ್‍ಡಿಎ ಕೂಟದ ಬಿಜೆಪಿ ಜೊತೆ ಅಸ್ಸಾಂ ಗಣ್ ಪರಿಷದ್ ಕೈ ಜೋಡಿಸಿದೆ. 2016ರಲ್ಲಿ ಎನ್‍ಡಿಎ 86 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಿತ್ತು. ಇತ್ತ ಯುಪಿಎ 26ರಲ್ಲಿ ಜಯ ತನ್ನದಾಗಿಸಿಕೊಂಡಿತ್ತು. ಸಿಎಂ ಸರ್ಬಾನಂದ್ ಸೋನಾವಾಲಾ ಬಿಜೆಪಿ ಸಿಎಂ ಅಭ್ಯರ್ಥಿಯಾಗಿದ್ದು, ಅಸ್ಸಾಂನ ಶೇ.46ರಷ್ಟು ಜನ ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‍ನ ಗೌರವ್ ಗೋಗೊಯಿ ಅವರನ್ನ ಶೇ.25ರಷ್ಟು ಜನರ ಮೆಚ್ಚುಗೆ ಪಡೆದಿದ್ದಾರೆ.

pinarayi vijayan

ಕೇರಳದಲ್ಲಿ ಬಹುಮತದೊಂದಿಗೆ ವಿಜಯನ್ ಸರ್ಕಾರ:
ಆಡಳಿತದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರ ಮತ್ತೊಮ್ಮೆ ಅಧಿಕಾರ ಬರುವ ಸಾಧ್ಯತೆಗಳಿವೆ ಅನ್ನೋದು ಸಮೀಕ್ಷೆ ಹೇಳಿದೆ. ಪಿಣರಾಯಿ ವಿಜಯನ್ ನೇತೃತ್ವದ ಘಟಬಂಧನ 140ರಲ್ಲಿ 77 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಲಿದೆ. 2016ರಲ್ಲಿ ಪಿಣರಾಯಿ ಸರ್ಕಾರ 91ರ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆಡಳಿತ ವಿರೋಧ ಅಲೆಯ ನಡುವೆಯೂ ಎಲ್‍ಡಿಎಫ್ ಮತ್ತಷ್ಟು ಕ್ಷೇತ್ರ ಗೆದ್ದು ಸರ್ಕಾರ ರಚನೆ ಮಾಡಲಿದೆ ಸಮೀಕ್ಷೆ ಹೇಳಿದೆ.

Pinarayi Vijayan 1

2016ರಲ್ಲಿ 47 ಸೀಟ್ ಗೆದ್ದಿದ್ದ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಈ ಬಾರಿ 62 ಕ್ಷೇತ್ರಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ. 2016ರಂತೆ ಈ ಬಾರಿಯೂ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ದಾಖಲಿಸಬಹುದು. ಶೇ.39.3ರಷ್ಟು ಜನ ಸಿಎಂ ವಿಜಯನ್ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ಎರಡನೇ ಸ್ಥಾನದಲ್ಲಿದ್ದಾರೆ. ಚಾಂಡಿ ಅವರಿಗೆ ಶೇ.26.5 ಜನರು ಸಮೀಕ್ಷೆಯಲ್ಲಿ ಮತ ಹಾಕಿದ್ದಾರೆ.

BJP

ಪುದುಚೇರಿಯಲ್ಲಿ ಮಾತ್ರ ಎನ್‍ಡಿಎಗೆ ಗುಡ್ ನ್ಯೂಸ್:
ಪುದುಚೇರಿಯ 30 ಸದಸ್ಯರ ಪೈಕಿ 21 ಎನ್‍ಡಿಎ ಕೂಟದ ಅಭ್ಯರ್ಥಿಗಳು ಗೆಲ್ಲುತ್ತಾರೆ. ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಮತ್ತು ಡಿಎಂಕೆ ಜೊತೆಯಾಗಿ ಸ್ಪರ್ಧೆ ಮಾಡಿದ್ದು, 9 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಐಎನ್‍ಆರ್‍ಸಿಯ ಎನ್.ರಂಗಸ್ವಾಮಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ನೋಡಲು ಶೇ.50ರಷ್ಟು ಜನ ಇಷ್ಟಪಡುತ್ತಾರೆ. ಸದ್ಯ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

Rahul Gandhi 1 1

ಮಾರ್ಚ್ 27ರಿಂದ ಮತದಾನ ಆರಂಭ:
ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *