ಚಿಕ್ಕಮಗಳೂರು: ಹಾಡಹಗಲೇ ನಡು ಮಧ್ಯಾಹ್ನ ಬಂಗಾರದ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ಮೂರು ಚಿನ್ನದ ಸರ ದರೋಡೆ ಮಾಡಿರುವ ಘಟನೆಯಿಂದ ಜಿಲ್ಲೆಯ ಶೃಂಗೇರಿ ತಾಲೂಕು ಬೆಚ್ಚಿ ಬಿದ್ದಿದೆ.
ಹಾಡಹಗಲೇ ರಾಜಾರೋಷವಾಗಿ ಏಕಾಂಗಿಯಾಗಿ ವ್ಯಕ್ತಿಯೋರ್ವ ಈ ರೀತಿ ದರೋಡೆಗೆ ಮುಂದಾಗಿರುವುದರಿಂದ ಗ್ರಾಮೀಣ ಭಾಗದ ಜನ ಮತ್ತಷ್ಟು ಕಂಗಾಲಾಗಿದ್ದಾರೆ. ಜಿಲ್ಲೆಯ ಶೃಂಗೇರಿ ನಗರದಲ್ಲಿರೋ ನಾಗಪ್ಪ ಶೆಟ್ಟಿ ಎಂಬುವರ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿ ಒಡವೆಗಳನ್ನು ನೋಡುತ್ತಾ ಏಕಾಏಕಿ ಕೈನಲ್ಲಿದ್ದ ಬ್ಯಾಗಿನಿಂದ ಲಾಂಗ್ ತೆಗೆದು ಕುರ್ಚಿ ಮೇಲಿಟ್ಟಿದ್ದಾನೆ. ಲಾಂಗ್ ಕಂಡು ಅಂಗಡಿಯಲ್ಲಿದ್ದ ಮಹಿಳಾ ಕೆಲಸಗಾರರು ಕಿರುಚಿಕೊಂಡು ಸೈಡಿಗೆ ಹೋಗಿದ್ದಾರೆ.
ಕೂಡಲೇ ಕ್ಯಾಶ್ ಟೇಬಲ್ ದಾಟಿ ಒಳ ಹೋದ ದರೋಡೆಕೋರ ಕೈಗೆ ಸಿಕ್ಕಷ್ಟು ಚಿನ್ನದ ಒಡವೆಗಳನ್ನು ದೋಚಿಕೊಂಡು ಬ್ಯಾಗ್‍ನಲ್ಲಿ ತುಂಬಿಕೊಂಡಿದ್ದಾನೆ. ಆ ವೇಳೆಗೆ ಅಂಗಡಿಯಲ್ಲಿದ್ದ ಮಾಲೀಕ ಕೂಡ ಓಡಿಬಂದು ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳಾ ಕೆಲಸಗಾರರು ಕೂಡ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಆತ ಕೈಗೆ ಸಿಕ್ಕಷ್ಟು ಚಿನ್ನವನ್ನು ಚೀಲದಲ್ಲಿ ತುಂಬಿಕೊಂಡು ಕ್ಯಾಶ್ ಟೇಬಲ್ ದಾಟುವಾಗ ಅಂಗಡಿ ಮಾಲೀಕ ಆತನ ಮೇಲೆ ಚೇರಿನಿಂದ ಹೊಡೆದಿದ್ದಾನೆ. ಈ ವೇಳೆ ಕ್ಯಾಶ್ ಟೇಬಲ್ ದಾಟುವಾಗ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಆತ ಲಾಂಗ್ ಹಾಗೂ ಚೀಲವನ್ನು ಅಲ್ಲೆ ಬಿಟ್ಟು ಹೋಗಿದ್ದಾನೆ. ಆದರೆ ಕೈಯಲ್ಲಿದ್ದ ಮೂರು ಚಿನ್ನದ ಸರಗಳೊಂದಿಗೆ ನಾಪತ್ತೆಯಾಗಿದ್ದಾನೆ.
ಅಂಗಡಿಯವರು ಹಾಗೂ ಅಕ್ಕಪಕ್ಕದ ಜನ ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಆತ ಯಾರ ಕೈಗೂ ಸಿಕ್ಕದೇ ನಾಪತ್ತೆಯಾಗಿದ್ದಾನೆ. ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಆತನ ಗುರುತು ಕೂಡ ಪತ್ತೆಯಾಗಿಲ್ಲ. ಆದರೆ ಆತನ ಈ ಎಲ್ಲ ಕೃತ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಘಟನೆಯಿಂದ ಶೃಂಗೇರಿ ಪಟ್ಟಣ ಕೂಡ ಬೆಚ್ಚಿ ಬಿದ್ದಿದೆ.