ನವದೆಹಲಿ: ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದ್ದು, ಇಂತಹ ಗೊಡ್ಡು ಬೆದರಿಕೆಗಳಿಗೆ ಜಗತ್ತು ಆಸ್ಪದ ಕೊಡಬಾರದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚೀನಾ ಗಡಿ ವಿವಾದಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದು ವಿಶ್ವ ಇದಕ್ಕೆ ಆಸ್ಪದ ಕೊಡಬಾರದು. ಅಲ್ಲದೆ ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದೆ ಎಂದು ಶ್ಲಾಘಿಸಿದ್ದಾರೆ.
ಚೀನಾದ ಆಕ್ರಮಣಕಾರಿ ಕ್ರಮಗಳ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಳಿ ಹಲವು ಬಾರಿ ಚರ್ಚಿಸಿದ್ದೇನೆ. ಚೀನಿಯರು ನಂಬಲಾಗದಷ್ಟು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡರು. ಭಾರತ ಅದಕ್ಕೆ ತಕ್ಕ ಉತ್ತರ ನೀಡಿದೆ. ಚೀನಾದ ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್‍ಪಿಂಗ್ ನಡೆ ಹಾಗೂ ಗಡಿ ಪ್ರದೇಶದಲ್ಲಿನ ಅವರ ವರ್ತನೆ ಪ್ರಪಂಚದಾದ್ಯಂತ ವಿಸ್ತರಿಸಿದೆ. ಚೀನೀಯ ಕಮ್ಯೂನಿಸ್ಟ್ ಪಾರ್ಟಿಯ ಆಕ್ರಮಣಶೀಲತೆಯನ್ನು ನಾವು ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇದನ್ನು ನೀವು ದೊಡ್ಡ ಸನ್ನಿವೇಶದಲ್ಲಿ ಚರ್ಚಿಸಬೇಕು ಎಂದು ಭಾರತಕ್ಕೆ ಸಲಹೆ ನೀಡಿದ್ದಾರೆ.
ಜಗತ್ತು ಇಂತಹ ಬೆದರಿಕೆಗಳನ್ನು ಹೆದರಬಾರದು. ಅಲ್ಲದೆ ಇಂತಹ ಕೃತ್ಯವನ್ನು ಮುಂದುವರಿಸಲು ಬಿಡಬಾರದು. ಚೀನಾದ ಕಮ್ಯುನಿಸ್ಟ್ ಪಕ್ಷ ಈ ಕೃತ್ಯಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಜಗತ್ತು ಒಟ್ಟಾಗಬೇಕು. ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.
ಲಡಾಕ್‍ನ ಗಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಇದಾದ ಬಳಿಕ ಎರಡೂ ದೇಶಗಳು ತಮ್ಮ ಗಡಿ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಿದ್ದವು. ಎಲ್‍ಎಸಿ ಸುತ್ತ ಅಪಾರ ಪ್ರಮಾಣದ ಸೇನೆಯನ್ನು ಜಮಾವಣೆ ಮಾಡಲಾಗಿತ್ತು. ಹೀಗಾಗಿ ಯುದ್ಧದ ಭೀತಿ ಎದುರಾಗಿತ್ತು.
ಇದಾದ ಬಳಿಕ ಭಾನುವಾರವಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಉನ್ನತ ಮಟ್ಟದ ಸುದೀರ್ಘ ಮಾತುಕತೆ ನಡೆದಿತ್ತು. ಅಲ್ಲದೆ ದೋವಲ್ ಹಾಗೂ ವಾಂಗ್ ಭಾರತ ಹಾಗೂ ಚೀನಾದ ವಿಶೇಷ ಪ್ರತಿನಿಧಿಗಳಾಗಿ ಸಭೆ ನಡೆಸಿದ್ದರು. ಇದಾದ ಬಳಿಕ ಇದೀಗ ಚೀನಾ ಸೇನೆ ಗಡಿಯಿಂದ ಹಿಂದೆ ಸರಿಯುತ್ತಿದೆ.