ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚೀನಾ ದೇಶ ತಮ್ಮ ಕೆಂಪು ಬಾವುಟವನ್ನು ಚಂದ್ರನ ಮೇಲೆ ಹಾರಿಸಿದೆ.
50 ವರ್ಷದ ಹಿಂದೆ ಅಮೆರಿಕಾ ಯಶಸ್ವಿಯಾಗಿ ಚಂದ್ರನ ಮೇಲೆ ತನ್ನ ದೇಶದ ಬಾವುಟವನ್ನು ಹಾರಿಸಿತ್ತು. ಅಮೆರಿಕಾ ಬಳಿಕ ಚಂದ್ರನ ಮೇಲೆ ಬಾವುಟ ನೆಟ್ಟ 2ನೇ ರಾಷ್ಟ್ರ ಎಂಬ ಇತಿಹಾಸವನ್ನು ಚೀನಾ ದೇಶ ಸೃಷ್ಟಿ ಮಾಡಿದೆ. ಡ್ರಾಗನ್ ದೇಶ ನವೆಂಬರ್ 23ಕ್ಕೆ ಚಾಂಗ್ ಇ-5 ನೌಕೆ ಚಂದ್ರನಲ್ಲಿಗೆ ಕಳಿಸಿತ್ತು. ಅದು ಇಂದು ಯಶಸ್ವಿಯಾಗಿ ಚಂದ್ರನನ್ನು ತಲುಪಿದೆ.
ತಮ್ಮ ನೌಕೆ ಚಂದ್ರನಲ್ಲಿಗೆ ಹೋಗಿ ಬಾವುಟ ಹಾರಿಸಿರುವ ಫೋಟೋವನ್ನು ಚೀನಾ ದೇಶ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಚಂದ್ರನ ಬಳಿ ಪ್ರಯಾಣ ಬೆಳಸಿದ್ದ ಚಾಂಗ್ ಇ-5 ನೌಕೆಯ ಕ್ಯಾಮೆರಾದಿಂದ ಸೆರೆಹಿಡಿಯಲಾಗಿದೆ. ಇದರ ಜೊತೆಗೆ ಚಂದ್ರನಲ್ಲಿರುವ ಬಂಡೆಯ ಒಂದು ಮಾದರಿಯನ್ನು ಕೂಡ ಸಂಗ್ರಹ ಮಾಡಲಾಗಿದೆ. ಈ ಚಂದ್ರಯಾನದ ಯಶಸ್ಸಿನೊಂದಿದೆ ಚೀನಾ 2022ಕ್ಕೆ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದೆ.