– ತಕ್ಕ ಉತ್ತರ ನೀಡಿದ ಭಾರತೀಯ ಯೋಧರು
ಲೇಹ್: ಲಡಾಕ್ ಗಡಿ ವಾಸ್ತವ ರೇಖೆಯ ಬಳಿ ಚೀನಾ ಮತ್ತೆ ತಗಾದೆ ತೆಗೆದಿದ್ದು, ಭಾರತವನ್ನು ಕೆಣಕಲು ಪ್ರಯತ್ನಿಸಿದೆ. ಪ್ರಚೋದನಕಾರಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ ಮತ್ತೆ ತನ್ನ ನರಿ ಬುದ್ಧಿಯನ್ನು ತೋರಿಸಿದೆ.
Advertisement
ಈ ಹಿಂದೆ ನಮ್ಮ 20 ಸೈನಿಕರು ಹುತಾತ್ಮರಾದ ಘಟನೆ ಮಾಸುವ ಮುನ್ನವೇ ಇದೀಗ ಚೀನಾ ಮತ್ತೆ ಉದ್ಧಟತನ ಪ್ರದರ್ಶಿಸಿದೆ. ಈ ಕುರಿತು ಭಾರತೀಯ ಸೇನೆಯ ಪಿಆರ್‍ಒ ಕರ್ನಲ್ ಅಮನ್ ಆನಂದ್ ಮಾಹಿತಿ ನೀಡಿದ್ದು, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ)ಯವರು ಆಗಸ್ಟ್ 29 ಹಾಗೂ 30ರಂದು ಮಧ್ಯರಾತ್ರಿ ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ತಟದಲ್ಲಿ ಎರಡೂ ದೇಶಗಳ ನಡುವಿನ ಒಮ್ಮತವನ್ನ ಉಲ್ಲಂಘಿಸಲು ಯತ್ನಿಸಿದ್ದಾರೆ. ಇದೇ ಸರೋವರದ ವಿಚಾರವಾಗಿ ಉತ್ತರ ದಂಡೆಯ ಕುರಿತು ಭಾರತ ಮತ್ತು ಚೀನಾ ವಿವಾದ ಹೊಂದಿವೆ ಎಂದು ತಿಳಿಸಿದ್ದಾರೆ.
Advertisement
Advertisement
ಆಗಸ್ಟ್ 29, 30ರ ರಾತ್ರಿ ಚೀನಾದ ಪಿಎಲ್‍ಎ ಸೈನಿಕರು ಈ ಹಿಂದಿನ ಒಗ್ಗಟ್ಟಿನ ನಿರ್ಣಯವನ್ನು ಉಲ್ಲಂಘಿಸಿದ್ದಾರೆ. ಯಥಾ ಸ್ಥಿತಿ ಕಾಯ್ದುಕೊಳ್ಳುವುದನ್ನು ಬಿಟ್ಟು ಪ್ರಚೋದನಾರಿ ಕಾರ್ಯಾಚರಣೆ ನಡೆಸಿದ್ದಾರೆ. ಪೂರ್ವ ಲಡಾಖ್‍ನಲ್ಲಿ ನಡೆಯುತ್ತಿರುವ ಘರ್ಷಣೆ ಕುರಿತು ಸೇನೆ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದು, ಇದೇ ಸಮಯದಲ್ಲಿ ಚೀನಾ ಕಾಲು ಕೆದರಿ ಜಗಳಕ್ಕೆ ಬರುತ್ತಿದೆ. ಈ ಮೂಲಕ ಯಥಾ ಸ್ಥಿತಿ ಕಾಯ್ದುಕೊಳ್ಳದೆ ಉದ್ಧಟತನ ಪ್ರದರ್ಶಿಸುತ್ತಿದೆ ಎಂದು ಕರ್ನಲ್ ಆನಂದ್ ಹೇಳಿದ್ದಾರೆ.
Advertisement
ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಪಿಎಲ್‍ಎ ಕಾರ್ಯಾಚರಣೆ ನಡೆಸುವ ಕುರಿತು ಅರಿತಿದ್ದ ಭಾರತೀಯ ಸೈನಿಕರು, ತೀವ್ರ ಕಟ್ಟೆಚ್ಚರ ವಹಿಸಿದ್ದರು. ಪೂರ್ವ ತಯಾರಿ ಮಾಡಿಕೊಳ್ಳುವ ಮೂಲಕ ನಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಚೀನಾ ಸ್ಥಳದಲ್ಲಿ ಕ್ಯಾತೆ ತೆಗೆಯಬಹುದು ಎಂಬ ಅರಿವಿತ್ತು. ಈ ಮೂಲಕ ಸತ್ಯವನ್ನು ಬದಲಾಯಿಸುವ ಚೀನಾದ ಉದ್ದೇಶವನ್ನು ಅರಿಯಲಾಗಿತ್ತು. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಶಾಂತಿ ಕಾಪಾಡಲು ಭಾರತೀಯ ಸೇನೆ ಬದ್ಧವಾಗಿದ್ದು, ಮಾತುಕತೆ ಮೂಲಕ ಶಾಂತಿ ಕಾಪಾಡಲು ಸಿದ್ಧವಾಗಿದೆ. ಅದೇ ರೀತಿ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಹಾಗೂ ಕಾಯ್ದುಕೊಳ್ಳಲು ನಿರ್ಧಸಿದೆ. ಸಮಸ್ಯೆಗಳನ್ನು ಪರಿಹರಿಸಲು ಚುಶುಲ್‍ನಲ್ಲಿ ಬ್ರಿಗೇಡ್ ಕಮಾಂಡರ್ ಲೆವೆಲ್ ಸಭೆ ನಡೆಯುತ್ತಿದೆ. ಇಷ್ಟಾದರೂ ಚೀನಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಲಡಾಖ್ ಗಡಿಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಇದಾದ ಬಳಿಕ ಶಾಂತಿ ಕಾಪಾಡಲು ಸೇನೆ ಹಾಗೂ ರಾಜತಾಂತ್ರಿಕ ಸಭೆಗಳು ನಡೆಯುತ್ತಿವೆ. ಶಾಂತಿ ಕಾಪಾಡಲು ಇಷ್ಟೆಲ್ಲ ಪ್ರಯತ್ನ ನಡೆಯುತ್ತಿದ್ರೂ ಚೀನಾ ಮಾತ್ರ ತನ್ನ ನರಿ ಬುದ್ಧಿ ತೋರಿಸುತ್ತಿದೆ. ಗಡಿಯಲ್ಲಿ ಉದ್ಧಟತನ ಪ್ರದರ್ಶಿಸುತ್ತಿದೆ.