ಚಿರು ಯಾವತ್ತೂ ಚಿರಂಜೀವಿನೇ, ಮೇಘನಾನ ನೋಡಿ ಸಂಕಟವಾಯ್ತು: ಹರಿಪ್ರಿಯ

Public TV
3 Min Read
Chiranjeevi Sarja Haripriya

ಬೆಂಗಳೂರು: ನಟ ಚಿರು ಯಾವತ್ತೂ ಚಿರಂಜೀವಿನೇ ಎಂದು ನಟಿ ಹರಿಪ್ರಿಯ ಅವರು ಚಿರು ಸಾವಿನ ಬಗ್ಗೆ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

ಚಿರು ಅವರ ಜೊತೆ ಕಳೆದ ಸಮಯ ಮತ್ತು ಅವರ ಸಾವಿನ ಸುದ್ದಿಯನ್ನು ಕೇಳಿದಾಗ ಆದ ಆಘಾತವನ್ನು ಹರಿಪ್ರಿಯ ಇಲಿಹಂಚಿಕೊಂಡಿದ್ದಾರೆ. ಜೊತೆಗೆ ಚಿರು ಅವರನ್ನು ನೋಡಲು ಹೋದಾಗ ಅವರಿಗಾದ ನೋವು, ಮೇಘನಾ, ಅರ್ಜುನ್ ಸರ್ಜಾ ಮತ್ತು ಧ್ರುವ ಅವರ ಬಗ್ಗೆಯೂ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.

Chiranjeevi Sarja Haripriya 3

ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನು ನಾಲ್ಕೈದು ಸಲ ಓದಿದೆ. ಯಾಕೆಂದರೆ ಆ ಮೆಸೇಜ್‍ನ ನಂಗೆ ನಂಬುವುದಕ್ಕೆ ಸಾಧ್ಯನೇ ಆಗಲಿಲ್ಲ. ನಾನೇ ಏನಾದರೂ ತಪ್ಪು ಓದುತ್ತಿದ್ದೇನಾ ಎಂದು ಮತ್ತೆ ಮತ್ತೆ ಓದಿಕೊಂಡೆ. ಅಷ್ಟರಲ್ಲಿ ಬೇರೆ ಬೇರೆ ಕಡೆಯಿಂದಲೂ ಅದೇ ಮೆಸೇಜ್ ಬರುತ್ತಿತ್ತು. ಟಿವಿಯಲ್ಲೂ ಅದೇ ಬ್ರೇಕಿಂಗ್ ನ್ಯೂಸ್. `ಚಿರು ಇನ್ನಿಲ್ಲ’ ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗಿ ನಂಬುವುದಕ್ಕೆ ಆಗಲ್ಲ ಎಂದು ಹರಿಪ್ರಿಯ ಹೇಳಿದ್ದಾರೆ.

chiru 3

ಚಿರು ಮಾತ್ರ ಅಲ್ಲ, ಅವರ ಫ್ಯಾಮಿಲಿ ಎಲ್ಲರ ಜೊತೆ ಆ್ಯಕ್ಟ್ ಮಾಡಿದ್ದೀನಿ. ನಾನು, ಚಿರು `ಸಂಹಾರ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದೆವು. ಅಲ್ಲಿ ಹೀರೋಯಿನ್ ವಿಲನ್ ರೋಲ್. ಹಾಗಾಗಿ ನನಗೂ ಚಿರುಗೂ ಒಟ್ಟಿಗೆ ಇರೋ ಸೀನ್ಸ್ ಜಾಸ್ತಿ ಇರಲಿಲ್ಲ. ಆದರೆ ಸಾಂಗ್ ಶೂಟ್‍ನಲ್ಲಿ ನಾವಿಬ್ಬರೂ ತುಂಬಾ ಮಾತಾಡಿದ್ದು, ನಕ್ಕಿದ್ದು ಇದೆ. ಅದರಲ್ಲಿ ಕೊನೆಗೆ ಒಂದು ಫೈಟ್ ಇತ್ತು. ಆಗ ಒಂದು ಪಲ್ಟಿ ಹೊಡೆಯುವಾಗ ಆಯತಪ್ಪಿ ಜೋರಾಗಿ ನೆಲಕ್ಕೆ ಬಿದ್ದು `ಅಮ್ಮಾ’ ಅಂತ ಕಿರುಚಿದ್ದೆ. ಆವಾಗಿಂದ ಶೂಟಿಂಗ್ ಮುಗಿಯುವರೆಗೂ ನಾನು ಕಿರುಚಿದ ಟೋನ್‍ನಲ್ಲೇ `ಅಮ್ಮಾ’ ಎಂದು ರೇಗಿಸುತ್ತಿದ್ದರು ಚಿರು ಎಂದು ಹರಿಪ್ರಿಯ ಬರೆದುಕೊಂಡಿದ್ದಾರೆ.

chiru sarja 2

ಚಿರು ಇಲ್ಲ ಅಂದ ತಕ್ಷಣ ಶಾಕ್ ಆಗಿತ್ತು. ಭಾನುವಾರ ಟಿವಿಲಿ ನೋಡ್ತಾ ಮನೆಯಲ್ಲೇ ತುಂಬಾ ಅತ್ತಿದ್ದೆ. ಚಿರುನ ಆ ರೀತಿಯಲ್ಲಿ ಹೇಗೆ ನೋಡೋದು ಎಂದು ಹೋಗುವುದಕ್ಕೂ ಹಿಂಜರಿದೆ. ಸೋಮವಾರ ಕೊನೆದಾಗಿ ಒಂದು ಬಾರಿ ನೋಡಬೇಕು ಎಂದು ತಕ್ಷಣ ಹೊರಟೆ. ಆದರೆ ಅಲ್ಲಿ ಮೇಘನಾನ ಕಂಡು ನನಗೆ ಇನ್ನೂ ಜಾಸ್ತಿ ದುಃಖ ಆಯ್ತು. ಏನ್ ಸಮಾಧಾನ ಹೇಳುವುದಕ್ಕೂ ಮಾತೇ ಬರಲಿಲ್ಲ.

Chiranjeevi Sarja Haripriya 4

ಅಲ್ಲಿ ಯಾರೋ ಹೇಳುತ್ತಿದ್ದರು. ಮೇಘನಾ ಗರ್ಭಿಣಿ ಎಂಬ ವಿಷಯಾನ ಚಿರು ಸ್ವಲ್ಪದಿನದಲ್ಲೇ ಪಬ್ಲಿಕ್ ಮಾಡುತ್ತಿದ್ದರು ಎಂದು. ಆದರೆ ಅಷ್ಟರಲ್ಲಿ ಏನೇನಾಯ್ತಲ್ಲ? ಲೈಫ್ ಎಷ್ಟು ಅನ್‍ಪ್ರೆಡಿಕ್ಟೇಬಲ್ ಅಲ್ವಾ? ಒಬ್ಬರ ಸ್ಥಾನವನ್ನು ಇನ್ನೊಬ್ಬರು ಯಾವತ್ತೂ ತುಂಬಲು ಆಗಲ್ಲ ಎಂದು ಹರಿಪ್ರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

CHIRU 1 1

ಅರ್ಜುನ್ ಸರ್, ಕಾಫೀನ್ ಬಾಕ್ಸ್ ಗ್ಲಾಸ್‍ಗೆ ತಲೆ ಕೊಟ್ಟು, `ಚಿರು ಮಾಮ ಬಂದಿದ್ದೀನಿ, ಎದ್ದೇಳೋ’ ಅಂದಿದನ್ನು ನೋಡಿದಾಗ ತುಂಬಾ ಸಂಕಟ ಆಗಿತ್ತು. ಬೆಳೆದು ನಿಂತಿರೋ ಮಗನನ್ನು ಕಳೆದುಕೊಂಡ ಸಂಕಟದಲ್ಲಿರೋ ಅಪ್ಪ-ಅಮ್ಮಂಗೆ ಯಾವ ಸಾಂತ್ವನ ಸಮಾಧಾನ ಹೇಳೋಕೆ ಸಾಧ್ಯ? ಚಿಕ್ಕಂದಿನಿಂದ ಒಟ್ಟಿಗೇ ಆಡಿ ಬೆಳೆದ ಧ್ರುವಂಗೆ ಆಗಿರೋ ಕಷ್ಟ ಯಾರಾದರೂ ಊಹಿಸೋಕೆ ಸಾಧ್ಯನಾ? ಈ ಲಾಕ್‍ಡೌನ್ ಟೈಮಲ್ಲಿ ಎಲ್ಲ ಮನೇಲೇ ಇದ್ದು ಎಂದಿಗಿಂತ ಜಾಸ್ತಿ ಸಮಯ ಒಟ್ಟಿಗೇ ಕಳೆದಿರುತ್ತಾರೆ. ಆದರೆ ಈ ಸಮಯದಲ್ಲೇ ಹೀಗಾದರೆ ಹೇಗೆ ಎಂದು ಹರಿಪ್ರಿಯ ಪ್ರಶ್ನೆ ಮಾಡಿದ್ದಾರೆ.

Chiru Dhruva

ನಾನಲ್ಲ ಯಾರೇ ಆದರೂ ಸಾಂತ್ವನ ಹೇಳುವುದು ಬಿಟ್ಟು ಬೇರೇನೂ ಮಾಡೋಕಾಗಲ್ಲ. ಮೇಘನಾಗೆ ಅವರ ಅಮ್ಮ-ಅಪ್ಪಂಗೆ, ಅರ್ಜುನ್ ಸರ್‍ಗೆ, ಧ್ರುವಂಗೆ, ಅವರೆಲ್ಲರಿಗೂ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡು ದೇವರೇ ಅಂತ ಪ್ರಾರ್ಥನೆ ಮಾಡೋಣ. ಹೋದವರು ಹೋದಾಗ ಆಗೋ ನೋವಿಗಿಂತ ಆಮೇಲೆ ಅವರ ನೆನಪಾಗಿ ಆಗೋ ನೋವೇ ಅದೇ ದೊಡ್ಡ ಯಾತನೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಚಿರು ಫ್ಯಾಮಿಲಿಗೆ ದೇವರು ಕೊಡಲಿ ಎಂದು ಹರಿಪ್ರಿಯ ಬೇಡಿಕೊಂಡಿದ್ದಾರೆ.

Haripriya

ಚಿರು ಸಿನಿಮಾಗಳು ರಿಲೀಸ್ ಆಗೋದಿವೆ. ಇನ್ನೂ ತುಂಬಾ ಸಿನಿಮಾ ಮಾಡೋದಿತ್ತು. ಆದರೆ ಚಿರು ಇಲ್ಲ ಅನ್ನುವುದನ್ನು ನನಗೆ ಇನ್ನೂ ನಂಬುವುದಕ್ಕೇ ಆಗುತ್ತಿಲ್ಲ. ನೋಡಲು, ಮಾತನಾಡಲು, ರೇಗಿಸಲು ಚಿರು ಇನ್ನು ಕಾಣಿಸದೇ ಇರಬಹುದು. ಆದರೆ ಎಲ್ಲರ ಮನಸ್ಸಿಲ್ಲಿ ಚಿರು ಯಾವತ್ತೂ ಚಿರಂಜೀವಿನೇ ಎಂದು ಹರಿಪ್ರಿಯ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *