– ಸರ್ಜಾ ಸಾವಿಗೆ ಜಕ್ಕೇನಹಳ್ಳಿ ಜನತೆ ಕಂಬನಿ
ತುಮಕೂರು: ನಟ ಚಿರಂಜಿವಿ ಸರ್ಜಾ ಅಕಾಲಿಕ ಮರಣದಿಂದಾಗಿ ಅವರ ಅಜ್ಜಿ ಊರು ತುಮಕೂರು ಜಿಲ್ಲೆ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.
ಜಕ್ಕೇನಹಳ್ಳಿಯಲ್ಲಿ ಸರ್ಜಾ ಆಡಿ ಬೆಳೆದಿದ್ದರು. ಹಾಗಾಗಿ ಅವಿನಾಭಾವ ಸಂಬಂಧ ಇತ್ತು. ಜಕ್ಕೇನಹಳ್ಳಿಯಲ್ಲಿ ಅಭಿಮಾನಿಗಳು ಸೇರಬಹುದು ಎಂಬ ಕಾರಣಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿ ಭದ್ರತೆ ಒದಗಿಸಿದ್ದಾರೆ.
ಈ ನಡುವೆ ಗ್ರಾಮಸ್ಥರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಚಿರಂಜೀವಿ ಸರ್ಜಾರನ್ನು ನೆನೆದು ಕಂಬನಿ ಮಿಡಿದರು. ಅಲ್ಲದೆ ಪ್ರತಿ ವರ್ಷ ನಡೆಯುವ ಗ್ರಾಮದ ಜಾತ್ರೆಗೆ ಕುಟುಂಬ ಸಮೇತ ಬಂದು ಪೊಜೆ ಸಲ್ಲಿಸಿ ಸಮಾನ್ಯರಂತೆ ನಮ್ಮ ಜೊತೆ ಬೆರೆಯುತ್ತಿದ್ದರು ಎಂದರು.
ಇದೇ ವರ್ಷ ಮಾರ್ಚ್ 10ರಂದು ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ಅಹೋಬಲ ಲಕ್ಷ್ಮಿ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದರು. ಅರ್ಜುನ್ ಸರ್ಜಾ ದಂಪತಿ ಹಾಗೂ ಧ್ರುವ ಸರ್ಜಾ ದಂಪತಿ ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ದಂಪತಿ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಲ್ಲಕ್ಕಿ ಹೊತ್ತರು. ನಂತರ ತೇರು ಎಳೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉಭಯ ನಟರಿಗೆ ಅಭಿಮಾನಿಗಳು ಸುತ್ತುವರೆದು ಸೆಲ್ಫಿಗಾಗಿ ಮುಗಿಬಿದ್ದಿದ್ದರು.