ಚಿರತೆ ದಾಳಿಗೆ ಎರಡನೇ ಬಲಿ- ಸಂತ್ರಸ್ತೆ ಕುಟುಂಬಕ್ಕೆ 7.50 ಲಕ್ಷ ಪರಿಹಾರ ಭರವಸೆ ನೀಡಿದ ಡಿಸಿಎಂ

Public TV
1 Min Read
dcm ashwathnarayan 2

ರಾಮನಗರ: ನರಭಕ್ಷಕ ಚಿರತೆ ದಾಳಿಗೆ ಎರಡನೇ ಬಲಿಯಾಗಿದ್ದು, ಮಾಗಡಿ ಸುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.

ಶನಿವಾರ ಬೆಳಗ್ಗೆ ಮಾಗಡಿ ತಾಲೂಕಿನ ಕೊತ್ತಗಾನಹಳ್ಳಿ ಬಳಿಯ ಮಲ್ಲೂರು ಗ್ರಾಮದ ವೃದ್ಧೆ ಗಂಗಮ್ಮ ಮೇಲೆ ದಾಳಿ ನಡೆಸಿ ಚಿರತೆ ಕೊಂದಿದೆ. ಮಹಿಳೆಯನ್ನ ಎಳೆದುಕೊಂಡು ಹೋಗಿ ಗುರುತು ಸಿಗದಂತೆ ಬೇಟೆಯಾಡಿದ್ದು, ರುಂಡವನ್ನು ಕತ್ತರಿಸಿ, ಗುರುತು ಸಹ ಸಿಗದಂತೆ ಮಾಡಿದೆ. ಚಿರತೆ ದಾಳಿಯಿಂದಾಗಿ ತಾಲೂಕಿನ ಜನ ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.

RMG CHITHA AV 3

ಸುದ್ದಿ ತಿಳಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಸ್ಪಂದಿಸಿದ್ದು, ಮೃತ ಗಂಗಮ್ಮ ಕುಟುಂಬದವರಿಗೆ 7.50 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನರಭಕ್ಷಕ ಚಿರತೆಯನ್ನು ಹಿಡಿಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಿಳೆಯ ಸಾವಿನಿಂದಾಗಿ ಜಿಲ್ಲೆಯಲ್ಲಿ ಒಟ್ಟು ಇಬ್ಬರು ಚಿರತೆ ದಾಳಿಗೆ ಮೃತಪಟ್ಟಂತಾಗಿದ್ದು, ಮಲಗಿದ್ದ ಮಗುವನ್ನು ಚಿರತೆ ಎಳೆದುಕೊಂಡು ಹೋಗಿ ಕೊಂದಿದ್ದ ಘಟನೆ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿತ್ತು. ಮತ್ತೆ ಇಂದು ಬೆಳಗ್ಗೆ ಮಹಿಳೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಹೀಗಾಗಿ ಮಾಗಡಿ ತಾಲೂಕಿನ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *