ಹುಬ್ಬಳ್ಳಿ: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹೇಳಿ, ಎಂಟು ತಿಂಗಳ ಹಿಂದೆ ಇಬ್ಬರ ಮೇಲೆ ಹಲ್ಲೆ ನಡೆಸಿ 5.54 ಲಕ್ಷ ದರೋಡೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದ ಪ್ರಶಾಂತ ಕೊರಚರ (26), ಪ್ರವೀಣ ಕೊರಚರ (30), ಅನೀಲ ಕೊರಚರ (25), ಪರಮೇಶ್ ಕುಮಾರ್ ಕೊರಚರ (27), ಅರುಣ ಕೊರಚರ (26), ಹರಪ್ಪನಹಳ್ಳಿ ತಾಲ್ಲೂಕಿನ ಯಲ್ಲಾಪುರದ ಮಾರುತಿ ಜಿ.ಎಸ್.(28) ಬಂಧಿತರು. ದರೋಡೆ ಹಣದಿಂದ ಆರೋಪಿಗಳು ಖರೀದಿಸಿದ್ದ ಕಾರು, ಬೈಕ್, ಚಿನ್ನ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು ಹುಬ್ಬಳ್ಳಿಯ ತಾರಿಹಾಳ ಗ್ರಾಮದ ಸುರೇಶ ವೆಂಕಟಪ್ಪ ಎಂಬವರನ್ನು ಪರಿಚಯ ಮಾಡಿಕೊಂಡು. ನಮ್ಮ ಅಜ್ಜನಿಗೆ ಬಂಗಾರ ಸಿಕ್ಕಿದೆ. ಅದನ್ನ ಕಡಿಮೆ ಬೆಲೆ ಮಾರಾಟ ಮಾಡುವುದಾಗಿ ನಂಬಿಸಿದ್ದರು. ಅಲ್ಲದೇ ಚಿಕ್ಕ ಚಿಕ್ಕದಾದ ಅಸಲಿ ಬಂಗಾರದ ತುಣುಕುಗಳನ್ನ ನೀಡಿ 5.50.000 ಲಕ್ಷ ರೂಪಾಯಿಗೆ ಅರ್ಧ ಕೆಜಿ ಚಿನ್ನ ನೀಡುವುದಾಗಿ ನಂಬಿಸಿದ್ದರು.
ಆರೋಪಿಗಳ ಮಾತು ನಂಬಿ ಸುರೇಶ ತನ್ನ ಗೆಳೆಯ ವಿಜಯಭಾಸ್ಕರ್ ಜೊತೆ 5.50.000 ಹಣದೊಂದಿಗೆ ಚಿನ್ನ ಖರೀದಿಗೆ ಆಗಮಿಸಿದ ವೇಳೆ ಆರೋಪಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಟ್ಟಿಗೆಯಿಂದ ಹಲ್ಲೆ ಮಾಡಿ, ಹಣದ ಬ್ಯಾಗ್ ಹಾಗೂ ಜೇಬಿನಲ್ಲಿದ್ದ 4 ಸಾವಿರ ರೂಪಾಯಿ ನಗದು ಕಿತ್ತುಕೊಂಡು ಪರಾರಿಯಾಗಿದ್ದರು.
ಘಟನೆ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.