-ಕೃಷ್ಣನೂರಲ್ಲಿ ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಜೋರಾಗಿದೆ. ಉಡುಪಿ ಕೃಷ್ಣಮಠದಲ್ಲಿ ಸೌರಮಾನ ಪಂಚಾಂಗವನ್ನು ಆಧರಿಸಿ ಎಲ್ಲಾ ಧಾರ್ಮಿಕ ಆಚರಣೆಗಳು ನಡೆಯುತ್ತವೆ.
ದೇಶಾದ್ಯಂತ ಚಾಂದ್ರಮಾನ ಪಂಚಾಂಗದ ಪ್ರಕಾರ ಶ್ರೀಕೃಷ್ಣಜನ್ಮಾಷ್ಟಮಿ ಕಳೆದ ತಿಂಗಳೇ ನಡೆದಿದೆ. ಇಂದು ನಾಳೆ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಕೊರೊನಾ ಇರುವುದರಿಂದ ಶ್ರೀಕೃಷ್ಣಮಠದ ಸಿಬ್ಬಂದಿಗಳು ಮತ್ತು ಸ್ವಾಮೀಜಿಗಳು ಮಾತ್ರ ಸಾಂಪ್ರದಾಯಿಕ ಆಚರಣೆಯನ್ನು ನಡೆಸಿದ್ದಾರೆ. ಅಷ್ಟಮಿಯ ಹಿನ್ನೆಲೆಯಲ್ಲಿ ಕಡೆಗೋಲು ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯನ್ನು ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.
ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಬಾಲಗೋಪಾಲನ ಅಲಂಕಾರ ಮಾಡಿದರು. ನಿಂತ ಭಂಗಿಯಲ್ಲಿರುವ ಉಡುಪಿ ಶ್ರೀಕೃಷ್ಣ ಇಂದು ಚಿನ್ನದ ತೊಟ್ಟಿಲಿನಲ್ಲಿ ಕುಳಿತ ಕೃಷ್ಣನಾಗಿ ದರ್ಶನ ಕೊಡುತ್ತಿದ್ದಾನೆ. ಅಲಂಕಾರದ ನಂತರ ಪರ್ಯಾಯ ಸ್ವಾಮೀಜಿಯವರು ಮಹಾಪೂಜೆಯನ್ನು ನೆರವೇರಿಸಿದರು. ಸ್ವಾಮೀಜಿಗಳು ಮತ್ತು ಸಿಬ್ಬಂದಿಗಳು ದಿನಪೂರ್ತಿ ಉಪವಾಸವಿದ್ದು, ರಾತ್ರಿ 12.16ಕ್ಕೆ ಅರ್ಘ್ಯ ಪ್ರದಾನ ಮಾಡುವ ಮೂಲಕ ಉಪವಾಸವನ್ನು ತೊರೆಯಲಿದ್ದಾರೆ.
ನಾಳೆ ವಿಟ್ಲಪಿಂಡಿ ಮಹೋತ್ಸವ ಮೂಲಕ ಸಂಭ್ರಮ ಮತ್ತು ಕಾರ್ಯಕ್ರಮಗಳು ನಡೆಯಲಿದೆ. ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿರ್ಬಂಧ ಹೇರಲಾಗಿದೆ. ಹೀಗಾಗಿ ಕೃಷ್ಣಮಠದ ಸಿಬ್ಬಂದಿಗಳು ಮತ್ತು ಗೋಶಾಲೆಯ ಗೊಲ್ಲ ಸಮುದಾಯದವರು ಅಷ್ಟಮಿ ಮತ್ತು ವಿಟ್ಲಪಿಂಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.