ರಾಯಚೂರು: ಜಿಲ್ಲೆಯ ಮಾನವಿ ತಾಲೂಕಿನ ಹೀರಾ ಬುದ್ದಿನ್ನಿ ಗ್ರಾಮದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸುವವರೆಗೆ ಅಧಿಕಾರಿಗಳನ್ನ ಗ್ರಾಮದಿಂದ ಹೊರಹೋಗಲು ಬಿಡುವುದಿಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಕಳದ 26 ವರ್ಷಗಳಿಂದ ಹೀರಾ ಬುದ್ದಿನ್ನಿ ಗ್ರಾಮದ ಪಕ್ಕದಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದು ಮನೆಗಳು ಬಿರುಕು ಬಿಟ್ಟಿವೆ. ಅಲ್ಲದೆ ಗಣಿಗಾಗಿ ಭೂಮಿ ನೀಡಿದ ಗ್ರಾಮಸ್ಥರಿಗೆ ಉದ್ಯೋಗ ನೀಡಿಲ್ಲ ಅಂತ ಆರೋಪಿಸಿ ಗ್ರಾಮಸ್ಥರು 15 ದಿನಗಳಿಂದ ಗ್ರಾಮದಲ್ಲಿ ಧರಣಿ ನಡೆಸುತ್ತಿದ್ದಾರೆ.
Advertisement
Advertisement
ಗ್ರಾಮಸ್ಥರ ಹೋರಾಟ ಹಿನ್ನೆಲೆ ಇಂದು ಗ್ರಾಮಕ್ಕೆ ಭೇಟಿ ನೀಡಿದ ಹೀರಾ ಬುದ್ದಿನ್ನಿ ಗಣಿಯ ಉಸ್ತುವಾರಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಲಾಗಿದೆ. ಅಧಿಕಾರಿಗಳಾದ ಮೋಹನಸಿಂಗ್ ಹಾಗೂ ಸುರೇಶರನ್ನು ಗ್ರಾಮದಲ್ಲಿಯೇ ನಿರ್ಬಂಧಿಸಿದ ಗ್ರಾಮಸ್ಥರು ಗಣಿ ಕಂಪನಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಅಂತ ಆಗ್ರಹಿಸಿದ್ದಾರೆ. ಚಿನ್ನದ ಗಣಿಯಿಂದ ಬಾಧಿತವಾದ ಗ್ರಾಮಸ್ಥರಿಗೆ ಉದ್ಯೋಗ ನೀಡುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.