– ಹತ್ಯೆಗೈದು ಕೃಷ್ಣಾ ನದಿಗೆ ಬಿಸಾಕಿದ
– ಶವದ ಬಳಿ ಸಿಕ್ಕ ಚಿನ್ನವೇ ಸಾಕ್ಷಿ ಹೇಳಿತ್ತು
ಚಿಕ್ಕೋಡಿ(ಬೆಳಗಾವಿ): ಚಿನ್ನಕ್ಕಾಗಿ ಗೆಳೆಯನನ್ನೇ ಕೊಂದ ಪಾಪಿ ಸ್ನೇಹಿತನನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ನವನಾಥ ಬಾಬರ್(35) ಎಂದು ಗುರುತಿಸಲಾಗಿದ್ದು, ಈತ ಸಾಗರ್ ಪಾಟೀಲ್(30)ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಆದರೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇವರಿಬ್ಬರು ಉತ್ತರ ಪ್ರದೇಶದಲ್ಲಿ ಚಿನ್ನ ಕರಗಿಸಿ ಗಟ್ಟಿ ಬಂಗಾರ ಮಾಡುವ ಕಸುಬು ಮಾಡಿಕೊಂಡಿದ್ದರು. ಉತ್ತರ ಪ್ರದೇಶದ ಮಯಗಲ್ ಸರಾಯ್ ಎಂಬ ಊರಲ್ಲಿ ಬಂಗಾರದ ಅಂಗಡಿ ಕೂಡ ಇಟ್ಟಿದ್ದರು. ಸ್ನೇಹಿತ ತಂದಿದ್ದ ಬ್ಯಾಗಲ್ಲಿ ಬಂಗಾರವಿದೆ ಎಂದು ತಿಳಿದುಕೊಂಡು ಕೊಲೆ ಮಾಡಿದ್ದಾನೆ. ಆದರೆ ಕೊಲೆಯಾದ ಸಾಗರ್ ಬಂಗಾರವನ್ನು ಜೇಬಲ್ಲಿ ಇಟ್ಟುಕೊಂಡಿದ್ದ.
ಶವದ ಜೇಬಲ್ಲಿದ್ದ ಒಂದೂವರೆ ಕೆಜಿ ಬಂಗಾರವೇ ಕೊಲೆಗೆ ಸಾಕ್ಷಿಯಾಗಿತ್ತು. ಆರೋಪಿ ನವನಾಥ್ ಗೆಳೆಯ ಪಾಟೀಲ್ ನನ್ನು ಕೊಲೆ ಮಾಡಿ ಶವವನ್ನು ಕೃಷ್ಣಾ ನದಿಗೆ ಬಿಸಾಕಿ ಊರು ಸೇರಿದ್ದನು. ಇತ್ತ ಅಕ್ಟೋಬರ್ 4ರಂದು ಅಥಣಿ ತಾಲೂಕಿನ ಅವರಖೋಡ ಬಳಿ ಕೃಷ್ಣಾ ನದಿಯಲ್ಲಿ ಸಾಗರ್ ಮೃತದೇಹ ಪತ್ತೆಯಾಗಿತ್ತು. ಮೃತನ ಜೇಬಿನಲ್ಲಿದ್ದ ಬಂಗಾರದ ಜಾಡು ಹಿಡಿದು ಅಥಣಿ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಕೊಲೆ ಆರೋಪಿ ನವನಾಥ ಬಾಬರ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.