ಬಾಗಲಕೋಟೆ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರನ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ, ಚಿದಾನಂದ ಸವದಿ ಕಾರು ಚಾಲನೆ ಮಾಡುತ್ತಿರಲಿಲ್ಲ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ, ದೇವಲಾಪುರ ಕ್ರಾಸ್ ಬಳಿ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಘಟನೆ ನಡೆದಿದೆ. ಐಪಿಸಿ 304 ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ. ಘಟನೆ ವೇಳೆ ಚಿದಾನಂದ ಸವದಿ ಚಾಲನೆ ಮಾಡ್ತಿರಲಿಲ್ಲ. ಚಾಲನ ಹನಮಂತಸಿಂಗ್ ರಜಪೂತ್ ಅವರು ಚಾಲನೆ ಮಾಡ್ತಾ ಇದ್ದರು. ಚಾಲಕನನ್ನ ವಿಚಾರಣೆಗೆ ಒಳಪಡಿಸಲಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಡಿಸಿಎಂ ಮಗ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ: ಲಕ್ಷ್ಮಣ್ ಸವದಿ
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರಂಕ್ ಡ್ರೈವ್ ಎನ್ನೋದು ಸತ್ಯಕ್ಕೆ ದೂರವಾದದ್ದು. ಎಲ್ಲಾ ಪರೀಕ್ಷೆ ಮಾಡಲಾಗಿದೆ. ವಾಹನ ಚಾಲನೆ ಮಾಡ್ತಾ ಇದ್ದ ಚಾಲಕನನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಇದ್ದ ಸ್ಥಳೀಯರ ಹೇಳಿಕೆ ಪಡೆಯಲಾಗಿದೆ. ಸಂಬಂಧಿಗಳ ವೀಡಿಯೋ ಸ್ಟೇಟ್‍ಮೆಂಟ್ ಮಾಡಲಾಗಿದೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದರು. ಇದನ್ನೂ ಓದಿ: “ಕಾರ್ ಪ್ಲೇಟ್ ನಂಬರ್ ಅವರೇ ಕಲ್ಲಿನಿಂದ ಜಜ್ಜಿದ್ರು, ಫೋಟೋ ತೆಗೆದವರನ್ನ ನಿಂದಿಸಿ ಅವಾಜ್ ಹಾಕಿದ್ರು”
ಘಟನೆ ಸಂಬಂಧ ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ. ಒಂದು ವೇಳೆ ಇಂಥವರೇ (ಚಿದಾನಂದಂ ವಾಹನ ಚಾಲನೆ ಮಾಡ್ತಿದ್ದರು) ಎಂಬ ಸಾಕ್ಷ್ಯಾಧಾರಗಳಿದ್ದರೆ ಸಲ್ಲಿಸಬಹುದು. ಅದನ್ನೂ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.