ಚಿತ್ರದುರ್ಗ: ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಪಾಸಿಟಿವ್‍ನಿಂದಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ 110 ವರ್ಷದ ಅಜ್ಜಿ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆದರು. ಆಸ್ಪತ್ರೆಯಿಂದ ಮನೆಗೆ ತೆರಳುವಾಗ ತಮ್ಮ ಕುಟುಂಬಸ್ಥರನ್ನು ನೆನೆದು ಅಜ್ಜಿ ಆಸ್ಪತ್ರೆ ಆವರಣದಲ್ಲೇ ಕಣ್ಟೀರಿಟ್ಟರು.
ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ತಮ್ಮ ಮೊಮ್ಮಗನೊಂದಿಗೆ ಹಲವು ವರ್ಷಗಳಿಂದ ವಾಸವಾಗಿದ್ದ ಅಜ್ಜಿ, ತುಂಬಾ ಆರೋಗ್ಯವಾಗಿದ್ದರು. ಬಿಪಿ, ಶುಗರ್ ಸೇರಿದಂತೆ ಇನ್ನಿತರ ವಯೋಸಹಜ ಯಾವುದೇ ಖಾಯಿಲೆಗಳು ಸಹ ಇರಲಿಲ್ಲ. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಇವರ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಮಹಿಳೆಯರು ಹಾಗೂ ಒಂದು ವರ್ಷದ ಮಗುವಿಗೆ ಕೊರೊನಾ ಸೋಂಕು ಪತ್ತೆ ಯಾಗಿತ್ತು. ಆಗ ಅಜ್ಜಿ ಸೇರಿದಂತೆ ಏಳು ಜನರನ್ನು ತಪಾಸಣೆಗೆ ಒಳಪಡಿಸಿದಾಗ ಇವರಿಗೂ ಸೋಂಕು ತಗುಲಿರುವುದು ದೃಢವಾಗಿತ್ತು.
Advertisement
Advertisement
ವಯೋವೃದ್ಧೆ ಇನ್ನೇನು ಪುನಃ ಆರೋಗ್ಯವಾಗಿ ಮನೆಗೆ ವಾಪಸ್ ಬರುವುದಿಲ್ಲ ಎಂಬ ಆತಂಕ ಪೊಲೀಸ್ ಕ್ವಾಟ್ರಸ್ ನಲ್ಲಿ ಶುರುವಾಗಿತ್ತು. ಆದರೆ ಅದೃಷ್ಟವಶಾತ್ ಅಜ್ಜಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಹೆಮ್ಮಾರಿ ಕೊರೊನಾದಿಂದ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಮನೆಗೆ ತೆರಳುವಾಗ ಕುಟುಂಬಸ್ಥರನ್ನು ನೆನೆದ ಅಜ್ಜಿ, ಬಿಕ್ಕಿ ಬಿಕ್ಕಿ ಅತ್ತರು. ಆಗ ಯಾಕೆ ಅಳಿತಿದ್ದೀರಿ, ಹೆದರಬೇಡಿ ಎಂದು ನೆರೆದಿದ್ದವರು ಹೇಳಿದಾಗ, ನಮ್ಮ ಕುಟುಂಬಸ್ಥರಿಗೆ ಎಂತಹ ಸ್ಥಿತಿ ಬಂದಿದೆ. ಎಲ್ಲರೂ ಕ್ವಾರಂಟೈನ್ ಆಗಿದ್ದಾರೆ. ನಾನು ಈಗ ಡಿಸ್ಚಾರ್ಜ್ ಆಗಿದ್ದೇನೆ. ನಾನು ಎಲ್ಲಿಗೆ ಹೋಗಲಿ, ಏನು ಮಾಡಲಿ ಎಂದು ಆತಂಕ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಅಜ್ಜಿಯನ್ನು ಕರೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದ ಅಜ್ಜಿಯ ಮೊಮ್ಮಗ ಸಮಾಧಾನಪಡಿಸಿದರು. ಅಳಬೇಡ ನಮ್ಮ ಮನೆಗೆ ಹೋಗೋಣ ಎಂದು ಸಂತೈಸಿದರು. ಆಗ ಕ್ಷಣ ಕಾಲ ಸುಮ್ಮನಾದ ಅಜ್ಜಿ, ಓಮಿನಿಯಲ್ಲಿ ಕುಳಿತು ತಮ್ಮ ಮೊಮ್ಮಗ ಹಾಹೂ ಒಂದು ವರ್ಷದ ಮರಿ ಮೊಮ್ಮಗನನ್ನು ನೆನೆದು ಗದ್ಗದಿತರಾದರು. ಈ ವೇಳೆ ನೆರೆದಿದ್ದವರ ಕಣ್ಣಂಚಲಿ ಸಹ ನೀರು ತುಂಬಿತ್ತು. ಇಂತಹ ಪರಿಸ್ಥಿತಿ ಮತ್ತೆ ಯಾರಿಗೂ ಬರಬಾರದು ಎಂಬ ಮಾತುಗಳು ಸಾಮಾನ್ಯವಾಗಿತ್ತು. ಆಸ್ಪತ್ರೆಯ ಚಿಕಿತ್ಸೆ ಹಾಗೂ ಆರೈಕೆ ಬಗ್ಗೆ ಅಜ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗಂಜಿ ಸೇರಿದಂತೆ ಇತರೆ ದ್ರಾವಣಪದಾರ್ಥಗಳು ಶುಚಿಯಾಗಿ, ರುಚಿಯಾಗಿರುತ್ತಿತ್ತು. ಹೀಗಾಗಿ ನಾನು ಬೇಗ ಗುಣಮುಖಳಾದೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ತುಂಬಾ ಸಂತಸ ವ್ಯಕ್ತಪಡಿಸಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಬಸವರಾಜ್ ಹಾಗೂ ಡಾ.ಪ್ರಕಾಶ್ ಅವರ ಮೊಗದಲ್ಲಿ ಇನ್ನಿಲ್ಲದ ಸಂತಸ ಎದ್ದು ಕಾಣುತ್ತಿತ್ತು. ಹಾಗೇ ಕೊರೊನಾ ವಾರಿಯರ್ಸ್ ಗಳಾದ ಮಲ್ಲಣ್ಣ, ರವಿ ಕುಮಾರ್ ಹಾಗೂ ಮುಕ್ತಾರ್ ಅಹಮ್ಮದ್ ಕೂಡ ಖುಷಿಯಿಂದ ಅಜ್ಜಿಯನ್ನು ಬೀಳ್ಕೊಟ್ಟರು.