ಚಿತ್ರದುರ್ಗ: ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, ಹಿರಿಯೂರು ಮೂಲದ 75 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮಗನ ಪ್ರಾಥಮಿಕ ಸಂಪರ್ಕದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ಹಿರಿಯೂರಿನ ನಾಲ್ವರಿಗೆ ಹಾಗೂ ಚಿತ್ರದುರ್ಗದ ಓರ್ವ ಸೇರಿದಂತೆ ಒಟ್ಟು ಐವರಿಗೆ ಸೋಂಕು ತಗುಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಹಿರಿಯೂರಿನ 56 ವರ್ಷದ ಪುರುಷ, 44 ವರ್ಷದ ಮಹಿಳೆ, 54 ವರ್ಷದ ಮಹಿಳೆ, 22 ವರ್ಷದ ಪುರುಷ ಹಾಗೂ ಚಿತ್ರದುರ್ಗದ 39 ವರ್ಷದ ಪುರುಷ ಸೇರಿದಂತೆ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಶನಿವಾರ ಒಟ್ಟು 49 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಐವರಿಗೆ ಸೋಂಕು ತಗುಲಿದೆ. ಜಿಲ್ಲೆಯ ಒಟ್ಟು 103 ದೃಢಪಟ್ಟ ಪ್ರಕರಣಗಳಲ್ಲಿ 82 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 20 ಸಕ್ರಿಯ ಪ್ರಕರಣಗಳಿವೆ.
20 ಸಕ್ರಿಯ ಪ್ರಕರಣಗಳ ಪೈಕಿ ಚಿತ್ರದುರ್ಗದ ಕೋವಿಡ್-19 ಆಸ್ಪತ್ರೆಯಲ್ಲಿ 10, ಹಿರಿಯೂರು ತಾಲೂಕು ಧರ್ಮಪುರದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ 03, ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ 01, ಪರಶುರಾಂಪುರ-03, ಮೊಳಕಾಲ್ಮೂರು ತಾಲೂಕು ರಾಂಪುರದಲ್ಲಿ 02, ಹೊಳಲ್ಕೆರೆ ತಾಲೂಕು ಬಿ.ದುರ್ಗದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಒಬ್ಬ ಸೋಂಕಿತರ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು 25 ಕಂಟೈನ್ಮೆಂಟ್ ವಲಯಗಳಿದ್ದು, ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1967 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಈ ವರೆಗೆ ಒಟ್ಟು 2795 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ 500 ಜನ ಹೋಮ್ ಕ್ವಾರಂಟೈನ್‍ನಲ್ಲಿ ಹಾಗೂ ಇಬ್ಬರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇದ್ದಾರೆ. ಈ ವರೆಗೆ 8708 ಜನರ ಮಾದರಿ ಸಂಗ್ರಹಿಸಲಾಗಿದ್ದು, 5637 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ 189 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ.