ಚಿತ್ರದುರ್ಗ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಈ ಭಾಗದ ಈರುಳ್ಳಿ ಹೊರರಾಜ್ಯಗಳಿಗೂ ರಫ್ತಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಈರುಳ್ಳಿಗೆ ಬುಡಕೊಳೆರೋಗ ಕಾಣಿಸಿಕೊಂಡಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಭಾಗದ ರೈತರು ವಿವಿಧ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಕಳೆದ ವರ್ಷ ಈರುಳ್ಳಿ ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದರು. ಈ ವರ್ಷ ಉತ್ತಮ ಮಳೆ ಹಾಗೂ ನೀರಿನ ಪ್ರಮಾಣ ಹೆಚ್ಚಿದೆ ಎಂದು ಸಂತಸದಿಂದ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಆದರೆ ಇದೀಗ ಬುಡಕೊಳೆ ರೋಗ ಬಿಗ್ ಶಾಕ್ ನೀಡಿದೆ.
ಇದರಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಈರುಳ್ಳಿ ಬೀಜ ತಂದು ಬಿತ್ತನೆ ಮಾಡಿರುವ ಅನ್ನದಾತರು ಭಾರೀ ಆತಂಕಗೊಂಡಿದ್ದಾರೆ. ಹಾನಿಯಾದ ಪ್ರದೇಶಕ್ಕೆ ಇಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಲಹೆ ನೀಡಿದರು. ಹೊಸದುರ್ಗ ತಾಲೂಕಿನ ಹೊಸಕುಂದೂರು, ಶ್ರೀರಂಗಪುರ, ಬಾಗೂರು, ಆನಿವಾಳ, ನಾಗೇನಹಳ್ಳಿ ಗ್ರಾಮಗಳ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿಗೆ ಬುಡಕೊಳೆ ರೋಗ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಓಂಕಾರಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಶೋಭಾ ಅವರು ಹಾನಿಯಾದ ಪ್ರದೇಶದಲ್ಲಿ ಭೇಟಿ ಮಾಡಿ ರೈತರಿಗೆ ರೋಗದ ಬಗ್ಗೆ ಮಾಹಿತಿ ನೀಡಿದರು.
ಈ ರೋಗ ಉಲ್ಬಣಗೊಳ್ಳದಿರಲು ಮ್ಯಾಂಕೊಜೆಟ್ ಮತ್ತು ಮೆಟಾಲಾಕ್ಸಿಲ್ ಅಥವಾ ಮ್ಯಾಂಕೊಜೆಟ್ ಮತ್ತು ಕಾರ್ಜಿಡಿಜಂ ಸಿಂಪರಣೆ ಮಾಡಲು ಸೂಚಿಸಿದರು. ರೈತರೊಂದಿಗೆ ಸಂವಾದ ನಡೆಸಿದರು. ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಈರುಳ್ಳಿ ಬೆಳೆಗಾರರು, ಗ್ರಾಮಸ್ಥರು ಹಾಜರಿದ್ದರು.