ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 41 ಪಾಸಿಟಿವ್ ಪ್ರಕರಣಗಳು ಸೇರಿದಂತೆ 2 ಸಾವು ಸಂಭವಿಸಿರುವುದು ಜಿಲ್ಲೆಯ ಜನರ ನಿದ್ದೆಗಡಿಸಿದೆ.
ಚಿಕ್ಕಮಗಳೂರು 18, ಶೃಂಗೇರಿ 11, ಕೊಪ್ಪ, ಎನ್.ಆರ್.ಪುರ, ಕಡೂರು, ತರೀಕೆರೆಯಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗಿದ್ದು, ಈ 41 ಪ್ರಕರಣಗಳು ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ನಾಲ್ಕು ದಿನದ ಹಿಂದೆ 168 ಪ್ರಕರಣಗದ್ದ ಜಿಲ್ಲೆಯಲ್ಲಿ ಇಂದು ಸೋಂಕಿತರ ಸಂಖ್ಯೆ 291ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ 30-40 ಪ್ರಕರಣಗಳು ಕಂಡುಬರುತ್ತಿದ್ದು, ಜಿಲ್ಲೆಯ ಜನ ಕರೊನಾದಿಂದ ಕಂಗಾಲಾಗಿದ್ದಾರೆ.
ಕಳೆದ 4 ದಿನಗಳಲ್ಲಿ 124 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನ ಕಂಗಾಲಾಗಿದ್ದಾರೆ. 124 ಪ್ರಕರಣಗಳಲ್ಲಿ ಸುಮಾರು 40ಕ್ಕೂ ಅಧಿಕ ಪ್ರಕರಣಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಶೀತ, ಕೆಮ್ಮು, ಜ್ವರ ಎಂದು ಆಸ್ಪತ್ರೆಗೆ ಹೋದವರಿಗೆಲ್ಲ ಕರೊನಾ ಪಾಸಿಟಿವ್ ಬಂದಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಇಂದು 2 ಸಾವು: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು. ಈ ವರೆಗೆ ಒಟ್ಟು 9 ಜನರನ್ನು ಬಲಿ ಪಡೆದುಕೊಂಡಿದೆ. ಚಿಕ್ಕಮಗಳೂರಿನ ನಗರಸಭಾ ಮಾಜಿ ಅಧ್ಯಕ್ಷ 72 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಮೃತರು ಸಕ್ಕರೆ ಖಾಯಿಲೆ, ಬಿಪಿ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕೊಪ್ಪದ ಬಾಳಗಡಿಯ 70 ವರ್ಷದ ವೃದ್ಧೆ ಕೂಡ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕರೊನಾಗೆ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.