ಚಿಕ್ಕಬಳ್ಳಾಪುರ: ಜಿಲ್ಲಾ ಸಿವಿಲ್ ನ್ಯಾಯಾಲಯದ ಅಟೆಂಡರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರದ ಪ್ರಶಾಂತ ನಗರದ ಪ್ರಕೃತಿ ಶಾಲೆ ಹಿಂಭಾಗ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ನವೀನ್(30) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಬಾರದ ಹಿನ್ನೆಲೆ ಸಹೋದ್ಯೋಗಿಗಳು ಮನೆಗೆ ತೆರಳಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ನವೀನ್ ಮೃತದೇಹ ಪತ್ತೆಯಾಗಿದೆ. ಜೀನ್ಸ್ ಪ್ಯಾಂಟ್ ಹಾಗೂ ಶರ್ಟ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ರೀತಿ ಮೇಲ್ನೋಟಕ್ಕೆ ಕಂಡುಬಂದಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮ್ಮ ನ್ಯಾಯಾಲಯದ ಸಿಬ್ಬಂದಿ ಸಾವಿನ ಸುದ್ದಿ ತಿಳಿದು ಸ್ವತಃ ನ್ಯಾಯಾಧೀಶರಾದ ರೂಪಾರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.