ಹುಬ್ಬಳ್ಳಿ: ಅಪಘಾತದಲ್ಲಿ ತ್ರೀವವಾಗಿ ಗಾಯಗೊಂಡಿದ್ದ ಖಾಸಗಿ ವಾಹಿನಿ (ಪವರ್ ಟಿವಿ) ಕ್ಯಾಮೆರಾಮನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸುನೀಲ್ ಮೃತ ಕ್ಯಾಮೆರಾಮನ್. ಸೆಪ್ಟೆಂಬರ್ 30 ರಂದು ರಾತ್ರಿ ಹುಬ್ಬಳ್ಳಿ ಚಾಟ್ನಿ ಕಾಂಪ್ಲೆಕ್ಸ್ ಬಳಿ ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಹುಬ್ಬಳ್ಳಿಯ ಅಪ್ತಾಬ್ ಎಂಬಾತ ತ್ರೀವಗಾಗಿ ಗಾಯಗೊಂಡಿದ್ದ. ತಕ್ಷಣವೇ ಗಾಯಾಳುವನ್ನ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದನು.
ಜೊತೆಗೆ ಖಾಸಗಿ ವಾಹಿನಿ ಕ್ಯಾಮೆರಾಮನ್ ಸುನೀಲ್‍ಗೂ ಸಹ ಗಂಭೀರವಾಗಿ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುನೀಲ್ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕ್ಯಾಮೆರಾಮನ್ ಸುನೀಲ್ ಮೃತಪಟ್ಟಿದ್ದಾರೆ.
ಸದಾ ಚುರುಕಿನಿಂದಲೇ ಕೆಲಸ ಮಾಡುತ್ತಿದ್ದ ಸುನೀಲ್‍ಗೆ ಡಿಸೆಂಬರ್‌ನಲ್ಲಿ ವಿವಾಹ ಕೂಡ ನಿಗದಿಯಾಗಿತ್ತು. ಆದರೆ ಹಸೆಮಣೆ ಏರುವ ಮುನ್ನವೇ ಕ್ಯಾಮೆರಾಮನ್ ಸಾವನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕ್ಯಾಮೆರಾಮನ್ ಸಾವಿಗೆ ಧಾರವಾಡ ಜಿಲ್ಲಾ ಪತ್ರಕರ್ತರು ಸಂಘ ಕಂಬನಿ ಮಿಡಿದಿದ್ದು, ಮೃತನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಘಟನೆಯ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.