ಮಡಿಕೇರಿ: ದೇಶದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಚಿಕಿತ್ಸೆ ನೀಡಲು ವೈದ್ಯರು ಸಿಬ್ಬಂದಿ ಕೊರತೆ ತೀವ್ರವಾಗಿದೆ. ಪರಿಸ್ಥಿತಿ ಹೀಗಿದ್ದರೂ ಮೂವರು ದುಷ್ಕರ್ಮಿಗಳು ಸೋಮವಾರ ಕ್ಷುಲ್ಲಕ ಕಾರಣಕ್ಕೆ ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿವೇಕಾನಂದ ಪ್ರತಿಷ್ಠಾನದ ಆಸ್ಪತ್ರೆ ವೈದ್ಯ ಡಾ.ಜಿ ಹೊಸಮನಿ (70) ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ.
ಘಟನೆಗೆ ಕಾರಣ:
ಇಂದು ತಿತಿಮತಿ ಗ್ರಾಮದ ಸೈಯದ್ ಎಂಬವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೇ ಮಧ್ಯಾಹ್ನ 2:30ರ ಸುಮಾರಿಗೆ ಪ್ರಜ್ಞೆತಪ್ಪಿದ್ದಾರೆ. ಹೀಗಾಗಿ ಸೈಯದ್ ಹಾಗೂ ಆತನ ಸ್ನೇಹಿತರು ಚಿಕಿತ್ಸೆಗೆ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮಹಿಳೆಯನ್ನು ಯಾರು ಸರಿಯಾಗಿ ಗಮನಿಸಿಲ್ಲ. ಹೀಗಾಗಿ ಸ್ಥಳದಲ್ಲೇ ಇದ ಸೈಯದ್ ಫಿರೋಜ್ ಸಮೀರ್ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ಮಾತಿಗೆ ಮಾತು ಬೆಳೆದು ಹಲ್ಲೆಗೆ ಮುಂದಾಗಿದ್ದಾರೆ. ಖಾಸಗಿ ವೈದ್ಯ ಡಾ.ಜಿ ಹೊಸಮನಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ. ಬಳಿಕ ಹೊಸಮನಿ ಅವರಿಗೆ ಗೋಣಿಕೊಪ್ಪಲಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹಲ್ಲೆ ನಡೆಸಿದ ಮರಪಾಲದ ಫಿರೋಜ್, ಸಮೀರ್, ಎಡತೊರೆ ಸೈಯದ್‍ಆಲವಿ ಎಂಬವರನ್ನು ಗೋಣಿಕೋಪ್ಪ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.