ಬೆಳಗಾವಿ: ಸಾರಿಗೆ ಸಿಬ್ಬಂದಿ ಮುಷ್ಕರ ಇಂದು ತಾರಕಕ್ಕೇರಿದ್ದು, ಭಿಕ್ಷೆ ಬೇಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮಹಿಳೆಯೊಬ್ಬರು ಬಸ್ ಓಡಿಸುತ್ತಿದ್ದ ಚಾಲಕನಿಗೆ ತಾಳಿ ಹಾಕಲು ಯತ್ನಿಸಿದ್ದಾರೆ. ಬಳಿಕ ಬಸ್ ಸ್ಟೀಯರಿಂಗ್‍ಗೆ ಮಾಂಗಲ್ಯ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ನಗರದ ಬಸ್ ನಿಲ್ದಾಣದತ್ತ ಬರುತ್ತಿದ್ದ ಸರ್ಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದು, ಈ ವೇಳೆ ಬಸ್ ಒಳಗೆ ಹತ್ತಿ ಚಾಲಕನಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ ಯಾಕೆ ಓಡಿಸುತ್ತಿದೀಯಾ, ನಿಮ್ಮ ಕುಟುಂಬ ಚೆನ್ನಾಗಿರಲಿ. ನಮ್ಮ ಕುಟುಂಬ ಬೀದಿಗೆ ಬೀಳಲಿ ಅಂತನಾ? ಬಳೆ ಹಾಕಿ, ತಾಳಿ ಕಟ್ಟಿಕೋ ಎಂದು ಪ್ರತಿಭಟನಾನಿರತ ಮಹಿಳೆ ಹೇಳಿದ್ದಾರೆ. ಅಲ್ಲದೆ ಬಸ್ ಓಡಿಸುತ್ತಿದ್ದ ಚಾಲಕನಿಗೆ ಮಾಂಗಲ್ಯ ತೆಗೆದು ಹಾಕಲು ಮಹಿಳೆ ಯತ್ನಿಸಿದ್ದಾರೆ. ಬಳಿಕ ಬಸ್ ಸ್ಟೀಯರಿಂಗ್‍ಗೆ ಮಾಂಗಲ್ಯ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಕಾಲ ಹೈಡ್ರಾಮಾ ನಡೆಯಿತು.
ಮತ್ತೊಂದೆಡೆ ಅಶೋಕ ವೃತ್ತದಲ್ಲಿ ಬಸ್ ತಡೆದು ಚಾಲಕನಿಗೆ ಹೂವಿನ ಹಾರ ಹಾಕಿ ಮಹಿಳೆ ತರಾಟೆ ತೆಗೆದುಕೊಂಡಿದ್ದಾರೆ. ಚಲಿಸುತ್ತಿದ್ದ ಬಸ್ ಎದುರು ನಿಂತು ಬಸ್ ತಡೆದಿದ್ದು, ಬಳಿಕ ಬಸ್ ಏರಿ ಓಡೋಡಿ ಹೋಗಿ ಮಹಿಳೆ ಚಾಲಕನಿಗೆ ಹಾರ ಹಾಕಿದ್ದಾರೆ. ನಾವೆಲ್ಲ ಮಕ್ಕಳ ಜೊತೆ ಭಿಕ್ಷೆ ಬೇಡುತ್ತಿದ್ದೇವೆ, ನೀನು ಡ್ಯೂಟಿ ಮಾಡ್ತೀಯಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಚಾಲಕ ಉತ್ತರಿಸಿ, ನಾನು ಡ್ಯೂಟಿ ಮಾಡಲು ಬಂದಿಲ್ಲ, ಡಿಪೋಗೆ ಬಸ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿ ಪುತ್ರನ ಮೇಲೆ ಪೊಲೀಸರು ದರ್ಪ ತೋರಿದ್ದು, ಯುವಕನಿಗೆ ಏಟು ನೀಡಿ ವಶಕ್ಕೆ ಪಡೆದಿದ್ದಾರೆ. ಸಾರಿಗೆ ಸಿಬ್ಬಂದಿ ಪತ್ನಿಯರ ಮೇಲೆ ಸಹ ಪೊಲೀಸರು ದರ್ಪ ತೋರಿದ್ದಾರೆ. ಮಾರ್ಕೆಟ್ ಪೊಲೀಸರು ಬೇದರಿಕೆ ಹಾಕಿ ಮಹಿಳೆಯರನ್ನು ವಾಪಸ್ ಕಳುಹಿಸಿದ್ದಾರೆ.