ಚಿಕ್ಕಮಗಳೂರು: ಸುಮಾರು ಒಂದೂವರೆ ವರ್ಷದ ನಂತರ ಚಾರ್ಮಾಡಿ ಘಾಟ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಜಿಲ್ಲಾಡಳಿತ ಮರು ದಿನವೇ ರೆಡ್ ಸಿಗ್ನಲ್ ನೀಡಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಹಾಗೂ ಕಿರಿಕಿರಿ ಉಂಟಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಸಂಚಾರ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿತ್ತು. ಕಾರು, ಬೈಕು ಅಂಬುಲೆನ್ಸ್ ಸೇರಿದಂತೆ ಲಘು ವಾಹನಗಳಿಗೆ ಮಾತ್ರ ಅವಕಾಶವಿತ್ತು. ಬುಧವಾರ ಸಂಜೆ ಆದೇಶ ಹೊರಡಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಸೇರಿದಂತೆ ಆರು ಚಕ್ರದ ಲಾರಿಗಳ ಸಂಚಾರಕ್ಕೆ ಅನುಮತಿ ನೀಡಿದ್ದರು. ಇದರಿಂದ ಜನಸಾಮಾನ್ಯರು ಸಂತಸ ವ್ಯಕ್ತಪಡಿಸಿದರು. ಆದರೆ ಗುರುವಾರ ಸಂಜೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬುಧವಾರ ನೀಡಿದ್ದ ಆದೇಶವನ್ನು ಹಿಂಪಡೆದಿದ್ದಾರೆ. ಇದರಿಂದ ಜನಸಾಮಾನ್ಯರು ಮತ್ತೆ ಕಂಗಾಲಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಡುವ ಭಾಗದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು ಈ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾದಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ತೊಂದರೆಯಾಗುತ್ತದೆ. ಅಷ್ಟೆ ಅಲ್ಲದೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ ಎಂಬ ಮಂಗಳೂರು ಜಿಲ್ಲಾಧಿಕಾರಿ ಮನವಿ ಮೇರೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬುಧವಾರ ನೀಡಿದ ಆದೇಶವನ್ನು ಹಿಂಪಡೆದಿದ್ದಾರೆ. ಆರು ಚಕ್ರದ ಲಾರಿಗಳು ಸಂಚಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಈ ಭಾಗದಲ್ಲಿ ಸಂಚಾರ ಆರಂಭಿಸಿದ ಲಾರಿಗಳು ಕೊಟ್ಟಿಗೆಹಾರದ ಬಳಿ ಸಂಕಷ್ಟಕ್ಕೀಡಾಗಿವೆ.
ಮತ್ತೆ ಕಂಗಾಲದ ಜನ:
ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಗಳ ಸಂಚಾರ ಆರಂಭಗೊಂಡಿದ್ದ ರಿಂದ ಜನಸಾಮಾನ್ಯರು ಸಂತೋಷವಾಗಿದ್ದರು. ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಿ ಉಡುಪಿ ಹಾಗೂ ಮಂಗಳೂರಿಗೆ ಹೋಗುವ ರೋಗಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಸರ್ಕಾರ ನೀಡಿದ ಆದೇಶವನ್ನು ಒಂದೇ ದಿನದಲ್ಲಿ ಹಿಂಪಡೆದಿರುವುದು ಜನಸಾಮಾನ್ಯರು ಮತ್ತೆ ಸಂಕಷ್ಟಕ್ಕೀಡಾಗುವಂತೆ ಮಾಡಿದೆ.
ಅಷ್ಟೇ ಅಲ್ಲದೆ ಕೆಂಪು ಬಸ್ ಗಳು ಹಾಗೂ ಲಾರಿಗಳ ಸಂಚಾರ ಆರಂಭಗೊಂಡಿದ್ದರಿಂದ ಕೊಟ್ಟಿಗೆಹಾರದಲ್ಲಿ ವ್ಯಾಪಾರವನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಸಣ್ಣಸಣ್ಣ ವ್ಯಾಪಾರಿಗಳು ವ್ಯಾಪಾರದ ದೃಷ್ಟಿಯಿಂದ ಸಂತಸ ವ್ಯಕ್ತಪಡಿಸಿದರು. ಆದರೆ, ಸರ್ಕಾರ 24ಗಂಟೆಯೊಳಗೆ ಆದೇಶವನ್ನು ಹಿಂಪಡೆದು ವ್ಯಾಪಾರಿಗಳಿಗೂ ಬೇಸರ ಮೂಡಿಸಿದೆ.