ಚಿಕ್ಕಮಗಳೂರು: ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆ ಮಧ್ಯೆ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ಬುಧವಾರ ರಾತ್ರಿ ಚಾರ್ಮಾಡಿ ಘಾಟಿಯ ರಸ್ತೆಯ 11ನೇ ತಿರುವಿನಲ್ಲಿ ರಸ್ತೆ ಮಧ್ಯೆ ಸುಮಾರು ಅರ್ಧ ಗಂಟೆಗಳ ಕಾಲ ಒಂಟಿ ಸಲಗ ಠಿಕಾಣಿ ಹೂಡಿತ್ತು. ಆ ಕಡೆಯೂ ಹೋಗದೇ ಈ ಕಡೆಯೂ ಬರದೇ ಸುಮಾರು ಅರ್ಧ ಗಂಟೆಗಳ ನಿಂತಿದ್ದ ಒಂಟಿ ಸಲಗ ಕಂಡು ರಸ್ತೆ ಮಧ್ಯೆ ವಾಹನಗಳನ್ನ ನಿಲ್ಲಿಸಿಕೊಂಡಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು.
Advertisement
ಚಾರ್ಮಾಡಿ ಘಾಟಿಯಲ್ಲಿ ಹೀಗೆ ಒಂಟಿ ಸಲದ ರಸ್ತೆ ಮಧ್ಯೆ ಬಂದು ನಿಲ್ಲುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಆನೆ ಹೀಗೆ ರಸ್ತೆ ಮಧ್ಯೆ ನಿಂತಿದೆ. ಅದೃಷ್ಟವಶಾತ್ ಅನಾಹುತವೇನೂ ಸಂಭವಿಸಿಲ್ಲ. ಪ್ರಯಾಣಿಕರು ಹಾಗೂ ಸ್ಥಳೀಯರು ಆನೆಯನ್ನು ಸ್ಥಳಾಂತರಿಸುವಂತೆ ಅರಣ್ಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
Advertisement
Advertisement
ರಸ್ತೆ ಮಧ್ಯೆ ಆನೆಯನ್ನ ಕಂಡಿದ್ದೇ ತಡ ವಾಹನ ಸವಾರರು ಗಾಬರಿಯಿಂದ ವಾಹನಗಳ ಲೈಟ್ ಆಫ್ ಮಾಡಿ ಮೊಬೈಲ್ ಟಾರ್ಚ್ ಮೂಲಕ ಆನೆಯ ಚಲನವಲನಗಳನ್ನು ಗಮನಿಸಿದ್ದಾರೆ. ಸುಮಾರು ಅರ್ಧ ಗಂಟೆಯ ಬಳಿಕ ಆನೆ ಬಂದ ದಾರಿಯಲ್ಲೇ ವಾಪಸ್ ಹೋಗಿದೆ.
Advertisement
ಹಲವು ಬಾರಿ ಒಂಟಿ ಸಲಗ ರಸ್ತೆ ಮಧ್ಯೆ ನಿಂತಿದ್ದರೂ ಪ್ರಯಾಣಿಕರಿಗೆ ಯಾವುದೇ ತೊಂದರೆ ಮಾಡಿಲ್ಲ. ನಾಳೆಯೂ ಮಾಡೋದಿಲ್ಲ ಎಂದು ಹೇಳಲಾಗದು. ಮುಂದಿನ ದಿನಗಳಲ್ಲಿ ಆನೆಯ ಆರ್ಭಟದಿಂದ ಎನಾದರೂ ತೊಂದರೆಯಾದರೆ ಮತ್ತದೇ ಸರ್ಕಾರದ ಜವಾಬ್ದಾರಿಯಾಗಿರುತ್ತೆ. ಏನಾದರೂ ಅನಾಹುತವಾಗುವ ಮುನ್ನ ಅರಣ್ಯ ಇಲಾಖೆ ಆನೆಯನ್ನ ಸ್ಥಳಾಂತರಿಸಬೇಕೆಂದು ಸ್ಥಳೀಯರು ಹಾಗೂ ಪ್ರವಾಸಿ ಪ್ರಯಾಣಿಕರು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.