ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರಕ್ಕೆ ಜಿಲ್ಲಾಡಳಿತ ಸಂಪೂರ್ಣ ಬ್ರೇಕ್ ಹಾಕಿತ್ತು. ಆದರೆ ಈ ಮಾಹಿತಿ ತಿಳಿಯದೆ ಬಂದ ಹತ್ತಾರು ವಾಹನಗಳು ಚಾರ್ಮಾಡಿಯಲ್ಲಿ ಸಾಲುಗಟ್ಟಿ ನಿಂತಿವೆ.
ಚಾರ್ಮಾಡಿ ಹಾಗೂ ಕೊಟ್ಟಿಗೆಹಾರ ಸುತ್ತಮುತ್ತ ಸಾಧಾರಣ ಮಳೆ ಸುರಿಯುತ್ತಿದೆ. ಸುರಿಯುತ್ತಿರುವ ಮಳೆ ಮಧ್ಯೆಯೂ ವಾಹನ ಸವಾರರು ತಮ್ಮ ಊರುಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಆದರೆ, ಕೊಟ್ಟಿಗೆಹಾರದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಯಾವುದೇ ವಾಹನಗಳನ್ನು ಮುಂದೆ ತೆರಳಲು ಬಿಡುತ್ತಿಲ್ಲ. ಇದರಿಂದ ವಾಹನ ಸವಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
Advertisement
Advertisement
ಜಿಲ್ಲಾಡಳಿತ ಇಂದು ಬೆಳಗ್ಗೆ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿ ಆದೇಶ ಹೊರಡಿಸಿತ್ತು. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಚಾರ್ಮಾಡಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶಿಸಿದ್ದರು. ಆದರೆ ಈ ಮಾಹಿತಿ ತಿಳಿಯದೆ ಬಂದ ವಾಹನ ಸವಾರರು ಕೊಟ್ಟಿಗೆಹಾರದಲ್ಲಿ ಪರದಾಡುವಂತಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಣಕಲ್, ಬಾಳೂರು, ಸುಂಕಸಾಲೆ ಹಾಗೂ ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರಿಗೆ ಹಾಗೂ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿತ್ತು.
Advertisement
Advertisement
ಕಳೆದ ವರ್ಷ ಈ ಭಾಗದಲ್ಲಿ ಭಾರಿ ಮಳೆಯಿಂದ ಚಾರ್ಮಾಡಿಯಲ್ಲಿ ಸಾಕಷ್ಟು ತೊಂದರೆಯಾಗಿತ್ತು. ಬೆಟ್ಟಗುಡ್ಡಗಳು ಧರೆಗೆ ಉರುಳಿದ್ದವು. ರಸ್ತೆ ಕೂಡ ಕೊಚ್ಚಿ ಹೋಗಿತ್ತು. ಸರ್ಕಾರ ತಿಂಗಳುಗಟ್ಟಲೇ ಈ ಮಾರ್ಗವನ್ನು ದುರಸ್ತಿ ಮಾಡಿತ್ತು. ಈಗ ಮತ್ತೆ ಭಾರೀ ಮಳೆಯಾಗುತ್ತಿರುವುದರಿಂದ ಬೆಟ್ಟಗುಡ್ಡಗಳು ಹಸಿಯಾಗಿದ್ದು ಮತ್ತೆ ಕುಸಿಯುವ ಸಾಧ್ಯತೆಯಿಂದ ಜಿಲ್ಲಾಡಳಿತ ಈ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ಬ್ರೇಕ್ ಹಾಕಿತ್ತು. ಆದರೆ ಈ ಆದೇಶ ಗೊತ್ತು-ಗೊತ್ತಿಲ್ಲದೋ ಬಂದ ವಾಹನ ಸವಾರರು ಕೊಟ್ಟಿಗೆಹಾರದ ಬಳಿ ಪರದಾಡುವಂತಾಗಿದೆ.