– 48 ಗಂಟೆ ಕಾಲ ರೆಡ್ ಅಲರ್ಟ್
– ಮಲೆನಾಡಿನಲ್ಲಿ ವ್ಯಕ್ತಿ ಬಲಿ
– ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದು ಅಡಿಯಷ್ಟೇ ಬಾಕಿ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಂತೂ ಕಳೆದ 2 ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನಲ್ಲಿ ಮತ್ತೆ ಗುಡ್ಡ ಕುಸಿದಿದೆ. ರಸ್ತೆಯ ಮೇಲೆ ಬೃಹತ್ ಬಂಡೆಗಳು ಉರುಳಿ ಬೀಳುತ್ತಿದ್ದು, ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಬಂದ್ ಆಗಿದೆ.
ಈಗ ಮೂಡಿಗೆರೆ ತಾಲೂಕಿನ ಕುದ್ರೆಗುಂಡಿ ಬಳಿ ರಸ್ತೆಗೆ ಮರ ಬಿದ್ದ ಪರಿಣಾಮ ಚಿಕ್ಕಮಗಳೂರು-ಮೂಡಿಗೆರೆ ಸಂಚಾರವೂ ಬಂದ್ ಆಗಿದೆ. ರಾತ್ರಿ ಮೂರು ಗಂಟೆಯಿಂದ ವಾಹನಗಳು ನಿಂತಲ್ಲೇ ಇದೆ.
ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗಿದ್ದು ತುಂಗಾ ನದಿ ಆಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿಯಲ್ಲಿ ಮಳೆಗೆ 6 ಎಕರೆ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭದ್ರಾ ನದಿ ಬೋರ್ಗರೆದು ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕಳಸ- ಹೊರನಾಡು ಸಂಪರ್ಕ ಸೇತುವೆಯಾಗಿರುವ ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ ಎದುರಿಸುತ್ತಿದೆ. ಸೇತುವೆ ಮುಳುಗಡೆಗೆ 1 ಅಡಿಯಷ್ಟೇ ಬಾಕಿಯಿದೆ.
ಮೊದಲ ಬಲಿ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮೊದಲ ಬಲಿಯಾಗಿದೆ. ಕಡೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪರಮೇಶ್ವರಪ್ಪ (38) ಮೃತ ರೈತ. ವಿದ್ಯುತ್ ತಂತಿ ತುಳಿದು ಪರಮೇಶ್ವರ ಮೃತಪಟ್ಟಿದ್ದಾರೆ.ಭಾರೀ ಗಾಳಿ-ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತೋಟದಿಂದ ಹಿಂದಿರುಗುವಾಗ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಹಳ್ಳಿ ಸೇತುವೆ ಅಪಾಯದ ಅಂಚಿನಲ್ಲಿದೆ. ಕಳೆದ ಬಾರಿ ಶಿಥಿಲಾವಸ್ಥೆ ತಲುಪಿದ ಹಳ್ಳಿ ಸೇತುವೆ ಈ ವರ್ಷ ಕುಸಿಯುವ ಭೀತಿ ಎದುರಾಗಿದೆ. ಒಂದು ವೇಳೆ ಈ ಸೇತುವೆ ಕಳಚಿ ಬಿದ್ದರೆ ನಾಲ್ಕೈದು ಗ್ರಾಮಗಳ ಜನಕ್ಕೆ ನಗರ ಸಂಪರ್ಕಕ್ಕೆ ದಾರಿ ಇಲ್ಲದಂತಾಗುತ್ತದೆ.