– ನನ್ನಳಿಯ ನನಗೆ ಬೇಕು, ಮಗಳನ್ನ ಹೀಗೆ ನೋಡಲಾರೆ: ಕಣ್ಣೀರಿಟ್ಟ ಹೆತ್ತೊಡಲು
– ಪತ್ನಿಗೆ ಕರೆ ಮಾಡಿ ನರಳಿ ನರಳಿ ಸಾವನ್ನಪ್ಪಿದ ಸೋಂಕಿತ
ಚಾಮರಾಜನಗರ: ರಾಜ್ಯ ಸರ್ಕಾರದ ಕುಂಭಕರ್ಣನ ನಿದ್ದೆಗೆ 24 ಅಮಾಯಕ ಜೀವಗಳು ಬಲಿಯಾಗಿದೆ. ಈ ದುರಂತದಲ್ಲಿ ಪತಿಯನ್ನ ಕಳೆದುಕೊಂಡು ನವ ವಧು ನನ್ನ ತಾಳಿ ಉಳಿಸಿಕೊಡಿ ಅಂತ ಕಣ್ಣೀರಿಟ್ಟ ದೃಶ್ಯ ನೋಡಿದವರು ಕಣ್ಣೀರು ಹಾಕುವಂತಿತ್ತು. ಇಷ್ಟು ಚಿಕ್ಕ ವಯಸ್ಸಿನ ಮಗಳನ್ನ ಹೀಗೆ ನೋಡಲಾರೆ ಅಂತ ಸೆರಗೊಡ್ಡಿ ಅಳಿಯನನ್ನ ಉಳಿಸಿಕೊಡಿ ಎಂದು ಹೆತ್ತಮ್ಮ ಕಣ್ಣೀರಿಡುತ್ತಿತ್ತು.
Advertisement
ಬೆಳಗ್ಗೆ ಇಡ್ಲಿ ತರೋಕೆ ಹೇಳಿದ್ರು:
ಬೆಂಗಳೂರಿನ ಯಲಹಂಕದ ಮಹಾದೇವ ಸ್ವಾಮಿ ಎಂಬ 28 ವರ್ಷದ ಯುವಕನಿಗೆ ಪಾಸಿಟಿವ್ ಆಗಿತ್ತು. 3 ದಿನಗಳ ಹಿಂದೆ ಬೆಂಗಳೂರಲ್ಲಿ ವೆಂಟಿಲೇಟರ್ ಇಲ್ಲ ಎಂದು ಕುಟುಂಬಸ್ಥರು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕ್ಸಿಜನ್ ಸಿಗದೇ ಸೋಂಕಿತ ಸಾವನ್ನಪ್ಪಿದ್ದಾನೆ. ಜಿಲ್ಲಾಸ್ಪತ್ರೆ ಮುಂದೆ ಕುಟುಂಬಸ್ಥರು ಬಿದ್ದು ಹೊರಳಾಡಿದ್ರು. ನಮಗೆ ಫೆಬ್ರವರಿ 21ಕ್ಕೆ ಮದ್ವೆ ಆಗಿತ್ತು. ನಿನ್ನೆ ರಾತ್ರಿ ಅವರಿಗೆ ನಾನೇ ಊಟ ಮಾಡಿಸಿ ಬಂದಿದ್ದೆ. ಬೆಳಗ್ಗೆ ತಿಂಡಿಗೆ ಇಡ್ಲಿ ಬೇಕೆಂದು ಹೇಳಿದ್ದರು. ಆದರೆ ಬೆಳಗ್ಗೆ ನೋಡಿದ್ರೆ ಹೀಗಾಗಿದೆ ಎಂದು ಮಹಾದೇವ ಸ್ವಾಮಿ ಪತ್ನಿ ಗೋಳಾಡಿದರು.
Advertisement
Advertisement
ಮದ್ವೆಯಾಗಿ 2 ತಿಂಗಳು ಆಗಿತ್ತು:
ಮಹದೇವಸ್ವಾಮಿ ಮದುವೆಯಾಗಿ ಎರಡು ತಿಂಗಳು ಆಗಿತ್ತು. ನಿನ್ನೆ ರಾತ್ರಿ ಹತ್ತೂವರೆ ಸುಮಾರಿಗೆ ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ನನಗೆ ಆಕ್ಸಿಜನ್ ಪ್ರಾಬ್ಲಂ ಆಗ್ತಿದೆ. ಆಕ್ಸಿಜನ್ ಕೊಡ್ತಿಲ್ಲ ಅಂತ ಹೇಳಿದ್ದಾನೆ. ಆಗ ತಕ್ಷಣ ನರ್ಸ್ ಬಂದು ಫೋನ್ ಕಿತ್ತಿಕೊಂಡು ಇಟ್ಟುಕೊಂಡಿದ್ದಾರೆ. ಆಮೇಲೆ ಅವನು ನಾಲ್ಕೂವರೆ ಗಂಟೆ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದಾನೆ ಅಂತ ಮೃತನ ಸಂಬಂಧಿ ಆರೋಪಿಸಿದ್ದಾರೆ. 24 ಸೋಂಕಿತರ ಸಾವಿಗೆ ಕಾರಣವಾದ ಚಾಮರಾಜನಗರ ಜಿಲ್ಲಾಸ್ಪತ್ರೆ ಎದುರು ಮೃತರ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದರು. ಮೃತದೇಹದ ಮೇಲೆ ರಕ್ತದ ಕಲೆಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸುವ ದೃಶ್ಯಗಳು ಕಂಡು ಬಂದವು.
Advertisement
ಇಷ್ಟಾದ್ರೂ ಸರ್ಕಾರ ಮಾತ್ರ ಸಾಧ್ಯವಾದಷ್ಟೂ ನುಣಚಿಕೊಳ್ಳುವ ಮೂಲಕ ತನ್ನ ಹಳೆ ನಿರ್ಲಕ್ಷ್ಯದ ಚಾಳಿಯನ್ನ ಮುಂದುವರಿಸಿಕೊಂಡು, ಸಭೆ ಮಾಡ್ತೀವಿ, ಚರ್ಚೆ ಮಾಡ್ತೀವಿ, ತನಿಖೆ ಮಾಡ್ತೀವಿ ಅಂತ ತೋಚಿದ್ದನ್ನ ಹೇಳ್ಕೊಂಡು ಬೀಸೋ ದೊಣ್ಣೆಯಿಂದ ಪಾರಾದ್ರೆ ಸಾಕು ಅಂತ ಓಡಾಡ್ತಿದೆ.
ಫೆಬ್ರವರಿ ಆರಂಭದಲ್ಲಿ ಕೊರೊನಾ ಸ್ಫೋಟದ ಮುನ್ಸೂಚನೆಯನ್ನ ತಜ್ಞರು ನೀಡಿದ್ರೂ ಸರ್ಕಾರ ಮಾತ್ರ ಏನೂ ಆಗಿಲ್ಲ ಅನ್ನುವಂತೆ ತನ್ನ ರಾಜಕಾರಣದಲ್ಲಿ ಮೈಮರೆತಿತ್ತು. ಈಗ ಸರ್ಕಾರದ ಬೇಜಾವಾಬ್ದಾರಿಗೆ 24 ಜೀವಗಳು ಬಲಿಯಾಗಿವೆ. ಒಂದೊಂದು ಕುಟುಂಬದ್ದು ಕಣ್ಣೀರ ಕಥೆ. ಕೇಳಿದ್ರೆ ಕಲ್ಲು ಹೃದಯದಲ್ಲಿ ಕಣ್ಣೀರು ಜಿನುಗುತ್ತೆ. ತಮ್ಮವರನ್ನ ಕಳೆದುಕೊಂಡವರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅದಕ್ಕಿಂತ ಸಾಮಾನ್ಯ ಜನರು ಏನು ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನೋದು ತಿಳಿದ ಹುಂಬ ಸರ್ಕಾರ ಒಂದು ಸುದ್ದಿಗೋಷ್ಠಿ ನಡೆಸಿ ಅವರಿವರ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳೋಕೆ ಮುಂದಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.