ಚಾಮರಾಜನಗರ: ಪಾಳುಬಿದ್ದಿದ್ದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕು ಕಾಡಂಚಿನ ಗ್ರಾಮ ಬೆಲವತ್ತ ಬಳಿ ಮೇಲ್ಮಾಳದ ಜಮೀನೊಂದರಲ್ಲಿ ಶನಿವಾರಮುಂಟಿ ಗ್ರಾಮದ ಜಡೇಗೌಡ ಹಾಗೂ ಬೆಲವತ್ತ ಗ್ರಾಮದ ಮಾದಯ್ಯ ಅಕ್ರಮವಾಗಿ ಗಾಂಜಾ ಬೆಳೆದಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಮೂರು ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು, ಒಬ್ಬನನ್ನು ಬಂಧಿಸಿದ್ದಾರೆ.
ಒಟ್ಟು 26.800 ಕೆ.ಜಿ ತೂಕದ 134 ಗಾಂಜಾಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರಮುಂಟಿ ಗ್ರಾಮದ ಜಡೇಗೌಡನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿದ ಚಾಮರಾಜನಗರ ಎಸ್‍ಪಿ ದಿವ್ಯಸಾರಥಾಮಸ್, ಚಾಮರಾಜನಗರದಿಂದ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುವ ಬಗ್ಗೆ ಮಾಹಿತಿ ಇದ್ದು, ಈ ಸಪ್ಲೈ ಚೈನ್ ಕಟ್ ಮಾಡುತ್ತೇವೆ. ಬೆಂಗಳೂರಿನಲ್ಲಿ ಬಂಧಿತರಾಗಿರುವ ಗಾಂಜಾ ಪೆಡ್ಲರ್ ಗಳಿಗೆ ಚಾಮರಾಜನಗರ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಂಜಾ ಬೆಳೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ರಾಮಸಮುದ್ರ ಪೂರ್ವಠಾಣೆ ಪೊಲೀಸ್ ತಂಡಕ್ಕೆ ವೈಯಕ್ತಿಕವಾಗಿ 20 ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.



