– ಪೊಲೀಸರಿಗೂ ಕೊರೊನಾ ಅಂಟುವ ಭೀತಿಯಿಂದ ಕ್ರಮ
ಚಾಮರಾಜನಗರ: ದಕ್ಷಿಣ ಭಾರತದಲ್ಲೆ ಕರೊನಾ ಮುಕ್ತ ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿ ಇದೀಗ ಕರೊನಾ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ಆತಂಕ ಶುರುವಾಗಿದೆ. ಹೀಗಾಗಿ ಬಹುತೇಕ ಪೊಲೀಸ್ ಠಾಣೆಗಳು ಹೊರಗಿನಿಂದಲೇ ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆ ಸುಮಾರು 110 ದಿನಗಳ ಕಾಲ ಕೊರೊನಾ ಮುಕ್ತ ಜಿಲ್ಲೆಯಾಗಿ ಹಸಿರು ವಲಯದಲ್ಲಿತ್ತು. ಆದರೆ ಜೂನ್ 9 ರಿಂದ ಕೊರೊನಾ ಪ್ರಕರಣಗಳು ಪತ್ತೆಯಾಗಲಾರಂಭಿಸಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶುಕ್ರವಾರ ಒಂದೇ ದಿನ ಹತ್ತು ಹೊಸ ಪ್ರಕರಣ ದಾಖಲಾಗಿದ್ದು, ಇಂದು ಕೂಡ 14 ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ. ಅಲ್ಲದೆ ಸೋಂಕಿತರ ಪೈಕಿ ಗುಂಡ್ಲುಪೇಟೆಯ ಮಹಿಳಾ ಪೇದೆ ಹಾಗೂ ಪುಣಜೂರಿನ ಚೆಕ್ ಪೊಸ್ಟ್ ನಲ್ಲಿ ಪೇದೆಯೊಬ್ಬರಿಗೆ ಕೊರೊನಾ ವಕ್ಕರಿಸಿದೆ.
ಈ ಹಿನ್ನಲೆ ಮೂರು ಪೊಲೀಸ್ ಠಾಣೆಗಳನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದೆ. ಕೊರೊನಾ ವಾರಿಯರ್ಸ್ ಗಳಿಗೂ ಕೊರೊನಾ ಭೂತ ಕಾಡುತ್ತಿದ್ದು, ಇದರಿಂದ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳು ಕಟ್ಟಡದ ಹೊರಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿವೆ. ಪೆಂಡಾಲ್, ಚೇರ್‍ಗಳನ್ನು ಹಾಕಿ ಹೊರಗಿನಿಂದಲೇ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿದ್ದು, ಠಾಣೆಗೆ ಬರುವವರು ಇಲ್ಲೇ ಪೊಲೀಸರನ್ನು ಭೇಟಿ ಮಾಡಬೇಕಿದೆ. ಅಲ್ಲದೆ ದೂರು ದಾಖಲಿಸಬೇಕಿದ್ದರೆ, ಹೊರಭಾಗದಲ್ಲೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿಕೊಂಡ ನಂತರ ದೂರುದಾರರನ್ನು ಠಾಣೆಯೊಳಗೆ ಬಿಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಠಾಣೆಗಳು ಸಾರ್ವಜನಿಕರಿಗೆ ನೋ ಎಂಟ್ರಿ ಎನ್ನವಂತಾಗಿವೆ.