ಚಾಮರಾಜನಗರ: ಜಿಲ್ಲೆಯ ಮೆಡಿಕಲ್ ಕಾಲೇಜಿನ ಮಹಿಳಾ ಲ್ಯಾಬ್ ಟೆಕ್ನಿಷಿಯನ್, ಪೊಲೀಸ್ ಇಲಾಖೆಯ ವೈರ್‍ಲೆಸ್ ಪಿಎಸ್‍ಐ ಹಾಗೂ ಭೂಮಾಪಕಿಯ ಸಹಾಯಕ ಸೇರಿದಂತೆ ಇಂದು 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿದೆ.
ಇಂದು ಮೆಡಿಕಲ್ ಕಾಲೇಜಿನ ಕೋವಿಡ್ ಪ್ರಯೋಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬದನಗುಪ್ಪೆ ಗ್ರಾಮದ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಹಾಗೂ ಆಕೆಯ ಪತಿಗೆ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಇವರು ವಾಸಿಸುತ್ತಿದ್ದ ಚಾಮರಾಜನಗರ ತಾಲೂಕು ಬದನಗುಪ್ಪೆ ಗ್ರಾಮದ ಬೀದಿಯೊಂದನ್ನು ಸೀಲ್‍ಡೌನ್ ಮಾಡಲಾಗಿದೆ.
Advertisement
Advertisement
ಚಾಮರಾಜನಗರ ಪೊಲೀಸ್ ಇಲಾಖೆಯಲ್ಲಿ ವೈರ್‍ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‍ಐ ಒಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು, ಇವರು ವಾಸಿಸುತ್ತಿದ್ದ ಚಾಮರಾಜನಗರ ತಾಲೂಕು ಚಂದಕವಾಡಿ ಗ್ರಾಮದ ಬೀದಿಯನ್ನು ಸಹ ಸೀಲ್‍ಡೌನ್ ಮಾಡಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
Advertisement
ಚಾಮರಾಜನಗರದ ಭೂಮಾಪಕಿಯ ಸಹಾಯಕನಿಗೂ ಸೋಂಕು ತಗುಲಿದೆ. ಈತ ವಾಸ ಮಾಡುತ್ತಿದ್ದ ಚಾಮರಾಜನಗರ ತಾಲೂಕು ಭುಜಗನಪುರ ಗ್ರಾಮದ ಬೀದಿಯನ್ನು ಸೀಲ್‍ಡೌನ್ ಮಾಡಿ ಗ್ರಾಮಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಅಲ್ಲದೆ ಬಂದೀಗೌಡನಹಳ್ಳಿಯ ಇಬ್ಬರಿಗೆ ಗುಂಡ್ಲುಪೇಟೆಯ ಮೂವರಿಗೆ ಹಾಗೂ ಕೊಳ್ಳೇಗಾಲದ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.
Advertisement
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಗಡಿಭಾಗದ ಪ್ರದೇಶಗಳಲ್ಲಿ ಯಾರೂ ಒಳ ನುಸುಳದಂತೆ ಜಿಲ್ಲಾಡಳಿತ ಕ್ರಮವಹಿಸಿದೆ ಎನ್ನಲಾಗುತ್ತಿದೆ.
ಎಪಿಎಂಸಿ ತರಕಾರಿ ಮಂಡಿಗೆ ರಜೆ
ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಾಮರಾಜನಗರ ಎಪಿಎಂಸಿ ತರಕಾರಿ ಮಂಡಿಯನ್ನು ಆರು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಲಾಗಿದೆ. ಜೂನ್ 29ರಿಂದ ಜುಲೈ 4ರ ವರೆಗೆ ತರಕಾರಿ ಮಂಡಿಗೆ ರಜೆ ಮಾಡಲು ತರಕಾರಿ ವ್ಯಾಪಾರಿಗಳು, ದಲ್ಲಾಳಿಗಳು ತೀರ್ಮಾನಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದಲ್ಲಿ 18ಕ್ಕೂ ಹೆಚ್ಚು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಸಂಘಟನೆಗಳು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ವೇಳೆ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ವ್ಯಾಪಾರ ವಹಿವಾಟನ್ನು ನಡೆಸಿ ನಂತರ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ಬಗ್ಗೆ ಶಾಸಕ ನಿರಂಜನ್ ಕುಮಾರ್ ಮಾಹಿತಿ ನೀಡಿದರು.