– ಇಂದು 18 ಹೊಸ ಪ್ರಕರಣಗಳು ಪತ್ತೆ, 28 ಮಂದಿ ಡಿಸ್ಚಾರ್ಜ್
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಿನೇ ದಿನೇ ಕೊರೊನಾ ಅರ್ಭಟ ಹೆಚ್ಚಾಗುತ್ತಿದ್ದು, ಮಹಾಮಾರಿ ಜಿಲ್ಲೆಯಲ್ಲಿ ಇಂದು ಮೊದಲ ಬಲಿ ಪಡೆದಿದೆ.
ಇಂದು ಕೂಡ ಚಾಮರಾಜನಗರದಲ್ಲಿ ಕೊರೊನಾ ಸ್ಫೋಟವಾಗಿದ್ದು, 18 ಮಂದಿಗೆ ಸೋಂಕು ತಗುಲಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿಗೆ ಕೊರೊನಾ ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿರುವ ಸಿಬ್ಬಂದಿಗೂ ಆತಂಕ ಉಂಟು ಮಾಡಿದೆ.
ಬೆಂಗಳೂರು, ಕೊಡಗು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಯ ಪ್ರವಾಸದಿಂದ ವಾಪಾಸಾಗಿರುವವರಿಗೆ ಕೊರೊನಾ ದೃಢಪಟ್ಟಿದೆ. ಇದರ ಮಧ್ಯೆ ಸಂತಸದ ಸುದ್ದಿ ಎಂಬಂತೆ ಗುಣಮುಖರಾಗಿರುವ 28 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದರ ಜೊತೆಗೆ ಆಘಾತಕಾರಿ ಸುದ್ದಿ ಎಂದರೆ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ 58 ವರ್ಷದ ವ್ಯಕ್ತಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆ 163ಕ್ಕೆ ಹೆಚ್ಚಾಗಿದ್ದು, ಪ್ರಸ್ತುತ 86 ಸಕ್ರಿಯ ಪ್ರಕರಣಗಳಿವೆ. ಡಿಸ್ಚಾರ್ಜ್ ಆದವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.