– ಮಲೆ ಮಹದೇಶ್ವರ ಬೆಟ್ಟದ ಸುತ್ತ ತಮಿಳು ನಾಮಫಲಕಗಳು
ಚಾಮರಾಜನಗರ: ಕರ್ನಾಟಕದಲ್ಲಿ ಕನ್ನಡ ಡಿಂಡಿಮ ಬಾರಿಸಬೇಕಾದ ಕನ್ನಡಿಗರು ತಮಿಳು ಪ್ರೇಮಿಗಳಾಗಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ನೀವು ಎಲ್ಲೇ ಸಂಚಾರ ಮಾಡಿದರೂ ಕನ್ನಡ ನಾಮಫಲಕಗಳು ಮಾಯವಾಗಿವೆ. ಬರೀ ತಮಿಳು ನಾಮಫಲಕಗಳೇ ಕಾಣುತ್ತಿವೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಅಂತಾರೆ. ಆದರೆ ಕರ್ನಾಟಕದಲ್ಲೇ ತಮಿಳು ನಾಮಫಲಕಗಳು ರಾರಾಜಿಸುತ್ತಿದ್ದು, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇಷ್ಟೇನಾ ಗಡಿ ಜಿಲ್ಲೆ ಜನರ ಕನ್ನಡ ಪ್ರೀತಿ ಅನ್ನೋ ಅನುಭವ ಕಾಡುತ್ತಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಜ್ಯ ಪುನರ್ ವಿಂಗಡಣೆಗಿಂತಲೂ ಮೊದಲು ತಮಿಳುನಾಡು ಸರ್ಕಾರದ ಅಧೀನದಲ್ಲಿತ್ತು. ಪುನರ್ ವಿಂಗಡಣೆ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಸೇರಿದಂತೆ ಕೊಳ್ಳೇಗಾಲ ತಾಲೂಕಿನ ಹಲವು ಪ್ರದೇಶಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿದ್ದವು.
Advertisement
Advertisement
ಆದರೆ ಇತ್ತೀಚೆಗೆ ಇಲ್ಲಿನ ಗಡಿ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿಧಾನವಾಗಿ ಮಾಯವಾಗುತ್ತಿದೆ. ಕೊಳ್ಳೇಗಾಲದ ಭಾಗವೇ ಆಗಿದ್ದ ಈಗಿನ ಹನೂರು ತಾಲೂಕಿನ ಗಡಿ ಗ್ರಾಮಗಳು ತಮಿಳು ಮಯವಾಗಿವೆ. ಇಲ್ಲಿ ಕನ್ನಡವನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಮಾರ್ಟಳ್ಳಿ, ನಲ್ಲೂರು, ಹೂಗ್ಯಂ, ಗೋಪಿನಾಥಂ ಹೀಗೆ ಹಲವಾರು ಗ್ರಾಮಗಳಲ್ಲಿ ತಮಿಳು ಇಲ್ಲವೆ ಇಂಗ್ಲಿಷ್ ನಾಮಫಲಕಗಳೇ ಎದ್ದು ಕಾಣುತ್ತಿವೆ.
Advertisement
Advertisement
ಅಂಗಡಿ ಮುಂಗಟ್ಟುಗಳಿರಲಿ, ಧಾರ್ಮಿಕ ಸ್ಥಳಗಳಿರಲಿ, ಖಾಸಗಿ ಶಾಲೆಗಳಿರಲಿ ಎಲ್ಲೆಲ್ಲೂ ತಮಿಳು ನಾಮಫಲಕಗಳೇ ರಾರಾಜಿಸುತ್ತಿವೆ. ಹನೂರು ದಾಟುತ್ತಿದ್ದಂತೆ ತಮಿಳುನಾಡಿಗೆ ಬಂದಂತೆ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಕನ್ನಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿನವರಿಗೆ ಕೋರ್ಟು ಕಚೇರಿ, ಸರ್ಕಾರದ ಸೌಲಭ್ಯಗಳಿಗೆ ಮಾತ್ರ ಕರ್ನಾಟಕ ಬೇಕು, ಉಳಿದ ವ್ಯಾಪಾರ ವ್ಯವಹಾರಕ್ಕೆಲ್ಲ ತಮಿಳುನಾಡೇ ಬೇಕು ಎಂಬಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ.