– ತಮಿಳುನಾಡಿಗೆ ಈರುಳ್ಳಿ ಸಾಗಿಸ್ತಿದ್ದ ಚಾಲಕನಿಗೆ ಸೋಂಕಿನ ಶಂಕೆ
ಚಾಮರಾಜನಗರ: ರಾಜ್ಯದಲ್ಲಿಯೇ ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಚಾಮರಾಜನಗರ ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ ಕೊರೊನಾ ಖಾತೆ ತೆರೆದಿತ್ತು. ಆದರೆ ಇದೀಗ ಆ ವ್ಯಕ್ತಿ ಕೊರೊನಾದಿಂದ ಗುಣಮುಖನಾಗಿದ್ದು, ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಇದರಿಂದ ಮತ್ತೆ ಕೊರೊನಾ ಮುಕ್ತ ಚಾಮರಾಜನಗರ ಎಂಬ ಹೆಗ್ಗಳಿಕೆ ಬಂತಲ್ಲ ಎಂದು ಜಿಲ್ಲಾಡಳಿತ ಕೂಡ ಖುಷಿಯಾಗಿತ್ತು.
ಆದರೆ ಇದೀಗ ತಮಿಳುನಾಡಿಗೆ ಈರುಳ್ಳಿ ಸಾಗಣೆ ಮಾಡುತ್ತಿದ್ದ 39 ವರ್ಷದ ವ್ಯಕ್ತಿಗೆ ಸೋಂಕು ಶಂಕೆ ವ್ಯಕ್ತವಾಗಿದೆ. ಗುಂಡ್ಲುಪೇಟೆ ಪಟ್ಟಣದ ಹೆಚ್‍ಎಸ್‍ಎಂ ಬಡಾವಣೆಯ ನಿವಾಸಿಗೆ ಸೋಂಕು ದೃಢ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳು ಕೂಡ ದೌಡಾಯಿಸಿದ್ದು, ಸೋಂಕಿತ ಶಂಕಿತ ವ್ಯಕ್ತಿಯನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
Advertisement
Advertisement
ಶಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ, ದ್ವೀತಿಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಚಾಮರಾಜನಗರ ಜಿಲ್ಲಾಡಳಿತ ಮುಂದಾಗಿದೆ. ಚಾಮರಾಜನಗರದ ಪುಣಜನೂರು ಚೆಕ್ ಪೋಸ್ಟ್ ನಿಂದ ಈರುಳ್ಳಿ ಸಾಗಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವ್ಯಕ್ತಿ ಎಲ್ಲಿ ಸಂಚರಿಸಿದ್ದಾನೆ. ಯಾರೊಂದಿಗೆ ಸಂಪರ್ಕ ಬೆಳೆಸಿದ್ದಾನೆ ಎಂಬುವುದನ್ನು ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ವ್ಯಕ್ತಿ ವಾಸವಿದ್ದ ಗುಂಡ್ಲುಪೇಟೆ ಪಟ್ಟಣದ ಹೆಚ್‍ಎಸ್‍ಎಂ ಬಡಾವಣೆಯನ್ನು ಸೀಲ್ ಡೌನ್ ಮಾಡುವ ಚಿಂತನೆ ನಡೆಸಿದ್ದಾರೆ.