ಬಳ್ಳಾರಿ: ಕೊರೊನಾ ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಜನರ ಉದಾಹರಣೆಗೆ ನಮಗೆ ಸಿಗುತ್ತೆ. ಆದರೆ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ರಾಜ್ಯದ ಮೊದಲ ಶತಾಯುಷಿ ಅಜ್ಜಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಬರೋಬ್ಬರಿ ನೂರು ವರ್ಷದ ಅಜ್ಜಿ ಸೋಂಕಿನಿಂದ ಗುಣಮುಖ ಆಗಿದ್ದಾರೆ. ವಿಶೇಷ ಅಂದರೆ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಮ್ಮ ಮನೆಯ ಹಿರಿಯ ಮಗನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಿರಿಯ ಮಗನ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವ ಕಾರಣ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಮನೆಯ ಉಳಿದ ನಾಲ್ವರ ಸ್ವಾಬ್ ಟೆಸ್ಟ್ ಮಾಡಿದಾಗ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು.
- Advertisement
ಹಿರಿಯ ಮಗನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮನೆಯ ಮಂದಿಯ ಜೊತೆಯಲ್ಲಿ ಅಜ್ಜಿಯ ಸಹ ಗುಣಮುಖ ಆಗಿದ್ದಾರೆ. 80 ವರ್ಷದ ಮೇಲ್ಪಟ್ಟ ಜನರಲ್ಲಿ ಸೋಂಕು ಕಾಣಿಸಿಕೊಂಡರೇ ಬಹಳ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಅಜ್ಜಿ ಸೋಂಕಿತರ ಭಯವನ್ನು ದೂರ ಮಾಡಿದ್ದಾರೆ. ವೈದ್ಯರ ನೀಡಿದ ಔಷಧಿ ಹಾಗೂ ಬಿಸಿ ನೀರು ಕುಡಿಯುವುದು ಇದೆಲ್ಲವನ್ನೂ ಅಜ್ಜಿ ಚಾಚು ತಪ್ಪದೆ ಪಾಲನೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಬೇಗ ಗುಣಮುಖ ಆಗಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.