– ಮೂವರು ಆಸ್ಪತ್ರೆಗೆ ದಾಖಲು
ಚಿಕ್ಕಬಳ್ಳಾಪುರ: ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮನೆಯಲ್ಲಿ ಹೊಗೆ ಹಾಕಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ಮರಾಠಿ ಪಾಳ್ಯದಲ್ಲಿ ನಡೆದಿದೆ.
ರಾತ್ರಿ ಚಳಿ ಮತ್ತು ಸೊಳ್ಳೆ ಕಾಟಕ್ಕೆಂದು ಮಲಗುವ ಮುನ್ನ ಮನೆಯಲ್ಲಿ ಹೊಗೆ ಹಾಕಲಾಗಿತ್ತು. ಟಿನ್ ಡಬ್ಬದಲ್ಲಿ ಇದ್ದಿಲು ಹಾಕಿ ಬೆಂಕಿ ಹಚ್ಚಿ ಹೊಗೆ ಹಾಕಿ ಇಡೀ ಕುಟುಂಬವೇ ಗಾಢ ನಿದ್ರೆಗೆ ಜಾರಿದೆ. ಪರಿಣಾಮ ರಾತ್ರಿ ಪೂರ್ತಿ ಮನೆಯ ತುಂಬಾ ಹೊಗೆ ಆವರಿಸಿದ್ದು, ಕುಟುಂಬದ ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ನಿದ್ದೆಗೆ ಜಾರಿದ 16 ವರ್ಷದ ಬಾಲಕಿ ಹೊಗೆ ಸೇವಿಸಿ ಮಲಗಿದ್ದಲ್ಲೇ ಕೊನೆಯುಸಿರು ಎಳೆದಿದ್ದಾಳೆ. ಮೃತ ಬಾಲಕಿಯ ತಂದೆ ವೀರಾಂಜನೇಯ, ತಾಯಿ ಶಾಂತಮ್ಮ ಮತ್ತು ತಂಗಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತ ಕುಟುಂಬ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ಈ ಪ್ರಕರಣ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.