ಬೆಂಗಳೂರು: ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗೋದಿಲ್ಲ ಅನಿಸುತ್ತದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿಕೆ ನೀಡಿದ್ದಾರೆ.
ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ನಡೆ ವಿಚಾರವಾಗಿ ಇಂದು ಸ್ಯಾಂಡಲ್‍ವುಡ್‍ನ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿದರು. ರಾಜೇಂದ್ರಸಿಂಗ್ ಬಾಬು ಮಾತನಾಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚುನಾವಣೆಗೆ ತಡೆಯೊಡ್ಡಿ ಸಹಕಾರ ಸಂಘಗಳ ಉಪನಿಬಂಧನಾ ಅಧಿಕಾರಿ ಮಧ್ಯಂತರ ಆದೇಶ ಹೊರಡಿಸಿದೆ. ಆದರೂ ವಾಣಿಜ್ಯ ಮಂಡಳಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಸಮಾನ ಮನಸ್ಕರೆಲ್ಲ ಸೇರಿ ಈ ಬಗ್ಗೆ ಹೋರಾಟ ಮಾಡಲು ನಿರ್ಧಸಿದ್ದೇವೆ ಎಂದು ತಿಳಿಸಿದರು.
Advertisement
Advertisement
ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗುವುದಿಲ್ಲ ಎನಿಸುತ್ತದೆ. ಚೇಂಬರ್‍ನಿಂದಾಗಿ ನಾವೇ ಧ್ವನಿ ಇಲ್ಲದೇ ಇರುವ ಹಾಗೇ ಆಗಿದ್ದೇವೆ. ಅಲ್ಲದೆ ರಿಜಿಸ್ಟ್ರಾರ್ ಆಫ್ ಸೊಸೈಟಿಯಿಂದ ಫಿಲಂ ಚೇಂಬರ್ ಗೆ ಒಂದು ಪತ್ರ ಬಂದಿದೆ. ಅದರಲ್ಲಿ ಸಾಕಷ್ಟು ಆರೋಪಗಳಿವೆ ಎಂದು ಹೇಳಿದರು.
Advertisement
ಚೇಂಬರ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೃಷ್ಣೇ ಗೌಡ ಮತ್ತು ಜೆಡಿ ಎಂಬುವವರು 20 ಅಂಶಗಳಲ್ಲಿ ಅಕ್ರಮ ನಡೆದಿದೆ ಎಂಬುವುದರ ಬಗ್ಗೆ ದೂರು ನೀಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಈಗಾಗಲೇ ರಿಜಿಸ್ಟ್ರಾರ್‌ನ್ನ ಮಂಡಳಿಗೆ ನೇಮಕ ಮಾಡಲಾಗಿದೆ. ಆದರೆ ಮಂಡಳಿಯಿಂದ ರಾಜಕೀಯವಾಗಿ ಒತ್ತಡ ತಂದು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸತ್ಯ ಹೊರ ಬರಬೇಕು ಎಂಬ ಉದ್ದೇಶದಿಂದ ನಾವು ರಿಜಿಸ್ಟ್ರಾರ್‌ಗೆ ಮನವಿ ಮಾಡುತ್ತಿದ್ದೇವೆ. ರಿಜಿಸ್ಟ್ರಾರ್ ಆಫೀಸಿಗೆ ಈ ಮನವಿ ನೀಡಿ ಅದು ಸಿಎಂ ಬಳಿಗೆ ತಲುಪಿಸುತ್ತೇವೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಸತ್ಯ ಯಾವುದು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎಂದರು.
Advertisement
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೋವಿಡ್ ಸಂಕಷ್ಟ ಸಾಕು ಎನ್ನುತ್ತೀರುವಾಗಲೇ ಈ ಮರಿ ಕೋವಿಡ್ ಗಳನ್ನು ನೋಡಿ ಗಾಬರಿಯಾಗಿದೆ. ಚುನಾವಣಾ ಪ್ರಕ್ರಿಯೆ ನಡೆಯುವವರೆಗೂ ಯಾವುದು ಸರಿಯಾಗುವುದಿಲ್ಲ. ಅಲ್ಲಿ ಒಂದು ಗುಂಪು ಸೇರಿಕೊಂಡಿದೆ. ಅವರು ಬೈಲಾ ತಿದ್ದುಪಡಿ ಮಾಡುತ್ತಾರೆ, ಅದರಿಂದ ಅವರಿಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ನಾವು ನಮ್ಮ ಪಾಡಿಗೆ ಶೂಟಿಂಗ್ ಮಾಡುವುದರಲ್ಲಿ ನಿರತರಾಗಿರುತ್ತೇವೆ. ಆದರೆ ಇಲ್ಲಿ ನಡೆಯುವುದನ್ನು ಕೇಳುವವರು ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರ ಬಾಬು, ಸುರೇಶ್, ಮುರಳಿ, ಮದನ್ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.