ಚಿಕ್ಕಮಗಳೂರು: ಜಿಲ್ಲೆಯ ವಿವಾದಿತ ಸ್ಥಳ ಇನಾಂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿನ ನಿಷೇಧಿತ ಪ್ರದೇಶದಲ್ಲಿ ದತ್ತಾತ್ರೇಯ ಸ್ವಾಮಿಗೆ ಸಚಿವ ಸಿ.ಟಿ.ರವಿ ಕೈ ಮುಗಿಯುತ್ತಿರುವ ಫೋಟೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವ ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿ, ದತ್ತಪಾದುಕೆ ದರ್ಶನ ಪಡೆದರು. ಈ ವೇಳೆ ಸಚಿವ ಸಿ.ಟಿ.ರವಿ ಗುಹೆಯೊಳಗೆ ದೇವರಿಗೆ ಕೈಮುಗಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ದತ್ತಪೀಠದಲ್ಲಿ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಫೋಟೋವನ್ನು ತೆಗೆಯುವಂತಿಲ್ಲ. ಆದರೆ ಸಚಿವ ಸಿ.ಟಿ.ರವಿ ದತ್ತಪಾದುಕೆ ದರ್ಶನ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Advertisement
ಈ ವೇಳೆ ಅವರ ಜೊತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಇರುವುದು ಫೋಟೋದಲ್ಲಿ ಸಾಬೀತಾಗಿದೆ. ದತ್ತಪೀಠ ಹೋರಾಟದ ಮುಂಚೂಣಿ ನಾಯಕರಾಗಿರುವ ಸಚಿವರಿಗೆ ಇಲ್ಲಿ ಫೋಟೋ ತೆಗೆಯಬಾರದೆಂಬ ಆದೇಶವಿದ್ದರೂ ಗುಹೆಯೊಳಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಚಿವರು ಕಾನೂನು ಉಲ್ಲಂಘಿಸಿದಂತ್ತಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
Advertisement
ಈ ರೀತಿಯ ನಿಯಮ ಉಲ್ಲಂಘನೆ ಅವರಿಂದಲೇ ನಡೆದಿದೆಯೋ ಅಥವಾ ಅವರ ಜೊತೆ ಹೋಗಿದ್ದಂತಹ ಕಾರ್ಯಕರ್ತರಿಂದ ನಡೆದಿದೆಯೋ ಎಂಬುದರ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ, ಗುಹೆಯೊಳಗೆ ಪಾದುಕೆಯ ದರ್ಶನ ಪಡೆಯುತ್ತಿರುವ ಫೋಟೋಗಳು ಮಾತ್ರ ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ನಡೆ ಬಗ್ಗೆ ಸ್ಥಳಿಯರು ಪ್ರಶ್ನಿಸಿದ್ದಾರೆ.
ನಿಷೇಧಿತ ಪ್ರದೇಶದಲ್ಲಿ ಫೋಟೋ ತೆಗೆಯುವುದಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ ಹಿನ್ನೆಲೆಯಲ್ಲಿ ದೇವಾಲಯದ ಒಳಗಡೆ ಸಿಟಿ ರವಿ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಪ್ರಕಟಿಸಿಲ್ಲ.