ಚಮೋಲಿ ದುರಂತಕ್ಕೆ 12 ಮಂದಿ ಬಲಿ, 170 ಜನ ನಾಪತ್ತೆ

Public TV
5 Min Read
jharkhand

ಡೆಹ್ರಾಡೂನ್: ಉತ್ತರಾಖಂಡ್ ಚಮೋಲಿಯಲ್ಲಿ ನಡೆದ ದುರಂತಕ್ಕೆ 12 ಮಂದಿ ಬಲಿ, 170 ಮಂದಿ ನಾಪತ್ತೆಯಾಗಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಯುತ್ತಿದೆ ಸಾವು-ನೋವುಗಳ ಸಂಖ್ಯೆ ಏರಿಕೆಯಾಗುತ್ತಿದೆ.

ರಕ್ಷಣೆಗೆ ತೆರಳಿದ್ದ ಇಬ್ಬರು ಪೊಲೀಸರು ಕೂಡ ನಾಪತ್ತೆಯಾಗಿದ್ದಾರೆ. ಎನ್‍ಡಿಆರ್‍ಎಫ್‍ನಿಂದ 16 ಮಂದಿ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಎರಡನೇ ಸುರಂಗದಲ್ಲಿ 60 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಶ್ರೀನಗರ, ಹರಿದ್ವಾರ, ಋಷಿಕೇಶದಲ್ಲಿ ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಉತ್ತರ ಪ್ರದೇಶದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ಭಾನುವಾರ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಬಳಿ ಸಂಭವಿಸಿದ ಹಿಮನದಿ ಸ್ಫೋಟದಲ್ಲಿ ಅಲಕನಂದಾ ಮತ್ತು ಧೌಲಿಗಂಗಾ ನದಿಗಳಲ್ಲಿ ಪ್ರವಾಹ ಉಂಟಾಗಿ ಅನೇಕರು ನಾಪತ್ತೆಯಾಗಿದ್ದರು. ಪ್ರವಾಹದಲ್ಲಿ ಐದು ಸೇತುವೆಗಳು ಕೊಚ್ಚಿಹೊಗಿದ್ದು, ಮನೆಗಳು ಮತ್ತು ಎನ್‍ಟಿಪಿಸಿ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿದೆ. ಸಮೀಪದ ಹಳ್ಳಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಋಷಿಗಂಗಾದ ಸಣ್ಣ ವಿದ್ಯುತ್ ಯೋಜನೆಯು ಕೊಚ್ಚಿಹೋಗಿವೆ. ರಾಷ್ಟ್ರೀಯ ಮತ್ತು ರಾಜ್ಯದ ವಿಪತ್ತು ನಿರ್ವಹಣಾ ದಳ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಎನ್‍ಟಿಪಿಸಿ ಸ್ಥಾವರದಲ್ಲಿ 148 ಮತ್ತು ಋಷಿಗಂಗಾದಲ್ಲಿ ಕೆಲಸ ಮಾಡುತ್ತಿದ್ದ 22 ಮಂದಿ ಉದ್ಯೋಗಿಗಳು ಸೇರಿ ಒಟ್ಟು 170 ಜನರು ನಾಪತ್ತೆಯಾಗಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಸಿಕ್ಕಿಬಿದ್ದ 12 ಜನರನ್ನು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಗಳು ರಕ್ಷಿಸಿವೆ. ಸುಮಾರು ಮೂವತ್ತು ಮಂದಿ ಎರಡನೇ ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ, ಈ ಸುರಂಗ ಸುಮಾರು 2.5 ಕಿ.ಮೀ ಉದ್ದವಿದೆ ಎಂದು ವರದಿಯಾಗಿದೆ. ರಕ್ಷಣಾ ತಂಡಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿವೆ. 12 ಮೃತದೇಹಗಳು ಪತ್ತೆಯಾಗಿವೆ, 120 ಮಂದಿ ನಾಪತ್ತೆಯಾಗಿದ್ದಾರೆ.

ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ರಾವತ್ ಘೋಷಿಸಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹೆಚ್ಚುವರಿ 2 ಲಕ್ಷ ನೀಡಲಾಗುವುದು, ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ಪರಿಹಾರ ನೀಡಲಾಗುತ್ತದೆ. ದುರಂತದ ಬಗ್ಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜೊತೆ ಮಾತನಾಡಿದ್ದೇನೆ ಎಂದು ಪ್ರಧಾನಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.

ನೆರೆ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಜೋಶಿಮಠದಲ್ಲಿ 30 ಹಾಸಿಗೆಗಳ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. ಶ್ರೀನಗರ, ಋಷಿಕೇಶ, ಜಾಲಿಗ್ರಾಂಟ್ ಮತ್ತು ಡೆಹ್ರಾಡೂನ್‍ನ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲಿಗೆ ಐದು ಎನ್‍ಡಿಆರ್‍ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿತ್ತು. ಭಾನುವಾರ ಸಂಜೆ ವೇಳೆಗೆ ಗಾಜಿಯಾಬಾದ್‍ನ ಹಿಂಡನ್ ವಾಯುಪಡೆಯ ನೆಲೆಯಿಂದ ಐದು ಟನ್ ಪರಿಹಾರ ಸಾಧನಗಳೊಂದಿಗೆ ಇನ್ನೂ ಮೂರು ತಂಡಗಳನ್ನು ಕಳುಹಿಸಲಾಗಿದೆ. ಡೆಹ್ರಾಡೂನ್‍ನಿಂದ ಜೋಶಿಮಠಕ್ಕೂ ವಿಮಾನದಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಎರಡು ಐಟಿಬಿಪಿ ತಂಡಗಳು ಮತ್ತು ಹಲವಾರು ಎಸ್‍ಡಿಆರ್‍ಎಫ್ ತಂಡಗಳನ್ನು ಸಹ ಸಜ್ಜುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಸೇನೆಯು ಆರು ಕಾಲಮ್‍ಗಳನ್ನು ಕಳುಹಿಸಿದ್ದು, ಪ್ರತಿಯೊಂದರಲ್ಲೂ 100 ಸೈನಿಕರು, ಜೊತೆಗೆ ವೈದ್ಯಕೀಯ ತಂಡಗಳು ಮತ್ತು ಅರ್ಥ್ ಮೂವಿಂಗ್ ಸಾಧನಗಳು, ಎಂಜಿನಿಯರಿಂಗ್ ಕಾರ್ಯಪಡೆ, ನೌಕಾಪಡೆಯ ಏಳು ಡೈವಿಂಗ್ ತಂಡಗಳನ್ನು ಸಹ ನಿಯೋಜಿಸಲಾಗಿದೆ. ಈ ಪ್ರವಾಹದಲ್ಲಿ ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿವೆ. ಪ್ರವಾಹದ ನೀರು ಋಷಿಕೇಶ ಮತ್ತು ಹರಿದ್ವಾರ ತಲುಪುವುದನ್ನು ತಡೆಯುವ ಉದ್ದೇಶದಿಂದ ಅಧಿಕಾರಿಗಳು ಎರಡು ಅಣೆಕಟ್ಟುಗಳನ್ನು ಖಾಲಿ ಮಾಡಿದ್ದಾರೆ. ಜನರಿಗೆ ಗಂಗಾ ನದಿ ತೀರಗಳ ಬಳಿ ಹೋಗದಂತೆ ನಿಬರ್ಂಧಿಸಲಾಗಿದೆ. ಈ ಅವಘಡದಲ್ಲಿ ಸಾವಿನ ಸಂಖೆಯಲ್ಲಿ ಹೆಚ್ಚಾಗಬಹುದು ಎಂಬ ಮಾಹಿತಿ ಇದೆ.

ಎನ್‍ಸಿಎಂಸಿ (ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ) ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಪ್ರಕಾರ, ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ ಮತ್ತು ಈ ಹಂತದಲ್ಲಿ ಕೆಳಹಂತದ ಪ್ರದೇಶಗಳಲ್ಲಿ ಪ್ರವಾಹದ ಅಪಾಯವಿಲ್ಲ ಎಂದು ಹೇಳಿದೆ. ನೆರೆಯ ಹಳ್ಳಿಗಳಿಗೂ ಯಾವುದೇ ಆತಂಕ ಬೇಡ ಎಂದು ಎನ್‍ಸಿಎಂಸಿ ಸಭೆ ಬಳಿಕ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *