– ಇಂದು ಒಂದೇ ದಿನ 21 ಕೊರೊನಾ ಪಾಸಿಟಿವ್
ಹಾಸನ: ಜಿಲ್ಲೆಯಲ್ಲಿ ಇಂದು ಒಂದೇ ದಿನ 21 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೇರಿಕೆಯಾಗಿದೆ.
ಇತ್ತ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಕೊರೊನಾ ಹಾಸನದ ಕೊರೊನಾ ಹಾಟ್‍ಸ್ಟಾಟ್ ಆಗಿದೆ. ಇಂದು ಈ ತಾಲೂಕಿನಲ್ಲೇ ಬರೋಬ್ಬರಿ 16 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದನ್ನು ಬಿಟ್ಟರೇ ಹೊಳೆನರಸೀಪುರ ಮೂಲದ ಇಬ್ಬರು ಮತ್ತು ಹಾಸನ ಮೂಲದ ಮೂವರಿಗೆ ಸೋಂಕು ತಗುಲಿದೆ.
ಈ ವಿಚಾರದ ಬಗ್ಗೆ ಇಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಈಗ ಪಾಸಿಟಿವ್ ಬಂದಿರುವ 21 ಕೇಸ್‍ಗಳಲ್ಲಿ 2 ಕೇಸ್ ತಮಿಳುನಾಡಿನಿಂದ ಬಂದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಉಳಿದವರು ಮುಂಬೈನಿಂದ ಬಂದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಈ ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಎಂದಿದ್ದಾರೆ.
ಹಾಸನದಲ್ಲಿ ಇನ್ನೂ 400 ಟೆಸ್ಟ್‍ಗಳ ರಿಸಲ್ಟ್ ಬಾಕಿ ಇದೆ. ಬಹುತೇಕ ಎಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದಾರೆ. ಬಾಂಬೆಯಿಂದ ವಾಪಸ್ಸಾದ ಹಲವರು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಕೊರೊನಾ ಪಾಸಿಟಿವ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದುವರೆಗೂ 1549 ಜನ ಹಾಸನಕ್ಕೆ ಹೊರರಾಜ್ಯದಿಂದ ಬಂದಿದ್ದಾರೆ. 1200 ಜನ ಹೊರರಾಜ್ಯದಿಂದ ಹಾಸನಕ್ಕೆ ಬರಲು ಸೇವಾಸಿಂಧು ಆಪ್‍ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈಗಾಗಲೇ ಯಾರು ಹೊರರಾಜ್ಯದಿಂದ ಬರಲು ಪಾಸ್ ತೆಗೆದುಕೊಂಡಿದ್ದಾರೆ ಅವರಿಗಷ್ಟೇ ಜಿಲ್ಲೆಗೆ ಬರಲು ಅವಕಾಶ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.