– ಸರಣಿ ಕೊಲೆಗಳಿಂದ ಬೆಚ್ಚಿಬಿದ್ದ ಜನ
ಹಾಸನ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಸರಣಿ ಕೊಲೆಗಳು ಮುಂದುವರಿದಿದ್ದು, ಇಂದು ಮತ್ತೆ ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ನಡೆದಿದೆ.
ಮುರುಳಿಧರ್ (71), ಉಮಾದೇವಿ (67) ಕೊಲೆಯಾದ ವೃದ್ಧ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಮನೆಯನ್ನು ದರೋಡೆ ಮಾಡಲು ಬಂದು, ದಂಪತಿಯನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 9 ಮರ್ಡರ್ ಆಗಿವೆ.
ಮುರುಳಿಧರ್ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಸರ್ಕಾರ ಅವರಿಗೆ 80 ಎಕರೆ ಜಮೀನು ನೀಡಿತ್ತು. ಮುರುಳಿಧರ್ ದಂಪತಿಗೆ ಮಕ್ಕಳು ಇರಲಿಲ್ಲ. ಜೊತೆಗೆ ಮುರುಳಿಧರ್ ಬಿ.ಎಸ್ಸಿ ಅರ್ಗಿಕಲ್ಚರ್ ವ್ಯಾಸಂಗ ಮಾಡಿದ್ದರು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲೇ ದಂಪತಿ ವಾಸವಿದ್ದರು.
ಆದರೆ ಇತ್ತೀಚೆಗೆ ಅವರು ತಮ್ಮ ಜಮೀನನ್ನು ಮಾರಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಅವರು ಮನೆಯಲ್ಲಿ ಜಮೀನು ಮಾರಿರುವ ದುಡ್ಡನ್ನು ಇಟ್ಟಿಕೊಂಡಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿದ್ದಾರೆ. ಹಣಕ್ಕಾಗಿ ದಂಪತಿಯನ್ನು ಕೊಲೆ ಮಾಡಿ ಮನೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನು ಓದಿ: ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್
ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 6 ಕೊಲೆಗಳು ಆಗಿವೆ. ಜೊತೆಗೆ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪೊಲೀಸ್, ಕಾನೂನು ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈಗ ಘಟನಾ ಸ್ಥಳಕ್ಕೆ ಎಸ್.ಪಿ. ಶ್ರೀನಿವಾಸಗೌಡ ಭೇಟಿ ಪರಿಶೀಲನೆ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.