ಗಡಿಯಲ್ಲಿ ಭಾರತ, ಚೀನಾ ಮಾತುಕತೆ ಆರಂಭ

Public TV
2 Min Read
india china 1

– ಗಡಿ ಒಪ್ಪಂದ ರದ್ದು ಬಗ್ಗೆ ಮಾಹಿತಿ

ನವದೆಹಲಿ : ಪೂರ್ವ ಲಡಾಖ್‌ನ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವಿನ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಗಡಿಯಲ್ಲಿ ಎರಡು ಸೇನೆಯ ಹಿರಿಯ ಅಧಿಕಾರಿಗಳ ನಡುವೆ ಮತ್ತೊಂದು ಮಹತ್ವದ ಮಾತುಕತೆ ಆರಂಭವಾಗಿದೆ.

ಭಾರತ ಮತ್ತು ಚೀನಾ ಸೈನಿಕರ ನಡುವೆ ಮಿಲಿಟರಿ ಮಾತುಕತೆ ನಡೆಯುತ್ತಿದ್ದು ಲೆಫ್ಟಿನೆಂಟ್ ಜನರಲ್ ಕಮಾಂಡರ್ ಶ್ರೇಣಿಯ ಅಧಿಕಾರಿಗಳ ನಡುವೆ ಮಾತುಕತೆ ಆರಂಭವಾಗಿದೆ. ಭಾರತ ಪರ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಭಾಗಿಯಾಗಿದ್ದು ಎರಡು ಸೇನೆಗಳ ನಡುವೆ ನಡೆಯುತ್ತಿರುವ ಎರಡನೇ ಮಹತ್ವದ ಸಭೆ ಇದಾಗಿದೆ.

india china ladakh border conflict

ಎಲ್‌ಎಸಿ(ವಾಸ್ತವ ಗಡಿ ರೇಖೆ) ಮೊಲ್ಡೊ ಪ್ರದೇಶದಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಭಾರತೀಯ ಪಡೆಯಿಂದ ಚೀನಾಕ್ಕೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

ಗಡಿಯಲ್ಲಿ ಗುಂಡಿ ಹಾರಿಸದಿರುವ ಒಪ್ಪಂದವೂ ಸೇರಿ ಹಲವು ಒಪ್ಪಂದ ರದ್ದು ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಪಾಯಿಂಟ್ 14 ರಲ್ಲಿ ಚೀನಾ ಹಾಕಿರುವ ಟೆಂಟ್ ಗಳನ್ನು ಖಾಲಿ ಮಾಡುವಂತೆ ಒತ್ತಾಯಿಸಿದೆ. ಸಭೆ ಸದ್ಯ ಮಾತುಕತೆ ಹಂತದಲ್ಲಿದ್ದು‌ ಮತ್ತಷ್ಟು ಮಾಹಿತಿ ಸಿಗಬೇಕಿದೆ.

india china army

ಜೂನ್ 6 ರಂದು ಈ ಮೊದಲು ಮೊದಲ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎರಡು ಸೇನೆಗಳನ್ನು ಎಲ್‌ಎಸಿಯಿಂದ ಹಿಂದೆ ಸರಿಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದಾಗ್ಯೂ ಚೀನಾ ಮಾತುಕತೆ ಮುರಿದು ಗಡಿ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ ಗಡಿಯುದ್ದಕ್ಕೂ ಭಾರತ ಮತ್ತು ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಿದೆ.

LADAKH INDIAN CHINA

ಒಪ್ಪಂದ ಮಾಡಿಕೊಂಡಿದ್ದು ಯಾಕೆ?
ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿ ರೇಖೆ ಇಲ್ಲದ ಕಾರಣ ಗಡಿಯಲ್ಲಿ ಈ ರೀತಿ ಕಿತ್ತಾಟಗಳು ನಡೆಯುತಿತ್ತು. ಎರಡು ದೇಶಗಳ ಗಡಿಯನ್ನು ವಾಸ್ತವ ಗಡಿ ರೇಖೆಯಿಂದ(ಎಲ್‌ಎಸಿ – ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಗುರುತಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಗಡಿಗಳು ನಿರ್ಧಾರವಾಗಿಲ್ಲ. ಹೀಗಾಗಿ ಹಲವು ಬಾರಿ ಎರಡು ಕಡೆಯ ಸೈನಿಕರು ಗಡಿಯಲ್ಲಿ ಪಹರೆ ಕಾಯುತ್ತಿದ್ದಾಗ ಕಿತ್ತಾಟಗಳು ನಡೆಯುತ್ತಿದ್ದವು. ಎರಡು ಕಡೆಯಿಂದಲೂ ಪ್ರತಿರೋಧಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 1993, 1996ರಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದ ನಡೆಯಿತು.

Army india china

1993ರ ಒಪ್ಪಂದದ ಪ್ರಕಾರ ಎಲ್‌ಎಸಿ ದಾಟಿ ಯಾರೇ ಒಳಬಂದರೂ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಪ್ರಕಾರ ಎಲ್‌ಎಸಿಯ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎರಡು ದೇಶಗಳು ಯಾವುದೇ ಸ್ಫೋಟ ನಡೆಸಬಾರದು, ಗುಂಡಿನ ದಾಳಿ ನಡೆಸಕೂಡದು ಎಂಬ ಒಪ್ಪಂದಕ್ಕೆ ಬರಲಾಗಿದೆ. ಹೀಗಾಗಿ ಭಾರತ ಚೀನಾ ಗಡಿಯಲ್ಲಿ ಸೈನಿಕರು ಈ ಒಪ್ಪಂದಕ್ಕೆ ಬದ್ಧವಾಗಿದ್ದಾರೆ. ಆದರೆ ಕಳೆದ ವಾರ ನಡೆದ ಘರ್ಷಣೆಯ ಬಳಿಕ ಭಾರತ ಗಡಿ ಒಪ್ಪಂದ ರದ್ದು ಮಾಡಿದ್ದು ಸರ್ಕಾರ ಭಾರತೀಯ ಸೇನೆಗೆ ಪೂರ್ಣ ಅಧಿಕಾರವನ್ನು ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *